ಗದಗ: ‘ಭಾಷೆ, ನೆಲ, ಜಲದ ಪ್ರಶ್ನೆ ಬಂದಾಗ ಶತಮಾನಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ ಪ್ರಭುತ್ವವನ್ನು ಎಚ್ಚರಿಸುವ ಕಾರ್ಯ ಮಾಡುತ್ತ ಬಂದಿದೆ. ಪುಸ್ತಕ ಪ್ರಕಟಣೆಗಳ ಮೂಲಕ ಕನ್ನಡಿಗರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕತ್ವವನ್ನು ಸದಾ ಜಾಗೃತಗೊಳಿಸುವ ಕೆಲಸ ಮಾಡಿದೆ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪನ್ಯಾಸಕ ನಾಗಪ್ಪ ಹೂವಿನಭಾವಿ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು’ ವಿಷಯ ಕುರಿತು ಮಾತನಾಡಿದರು.
‘ಸಾಹಿತ್ಯ, ಸಂಸ್ಕೃತಿಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪರಿಷತ್‌ನ ಪಾತ್ರ ದೊಡ್ಡದು. ಸಮ್ಮೇಳನ, ಕಮ್ಮಟ, ಕಾರ್ಯಾಗಾರಗಳ ಮೂಲಕ ಬರಹಗಾರರು ಹಾಗೂ ಓದುಗರನ್ನು ಮುಖಾಮುಖಿಯಾಗಿಸಿ ಕನ್ನಡದ ಪ್ರಜ್ಞೆಯನ್ನು ಇಮ್ಮಡಿಗೊಳಿಸುವಲ್ಲಿ ಪರಿಷತ್ ಯಶಸ್ವಿಯಾಗಿದೆ’ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಮೇಶ ಪುರದ ಮಾತನಾಡಿ, ‘ಸಾಹಿತ್ಯ ಮನುಷ್ಯನನ್ನು ಮಾನವೀಯ ನೆಲೆಯಲ್ಲಿ ಚಿಂತಿಸುವಂತೆ ಮಾಡುತ್ತದೆ. ನಾಡು ನುಡಿ ಸಂರಕ್ಷಣೆ ಹಿನ್ನೆಲೆಯಲ್ಲಿ ಪರಿಷತ್ ರೂಪುಗೊಂಡಿದೆ. ಜಿಲ್ಲೆಯಲ್ಲಿ ವಿವೇಕಾನಂದಗೌಡ ಪಾಟೀಲರ ನೇತೃತ್ವದಲ್ಲಿ ಪರಿಷತ್‌ನ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯುತ್ತಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಬರಹಗಾರರು ಸಾಕಷ್ಟು ಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದರೂ ಓದುಗರ ಸಂಖ್ಯೆ ತೃಪ್ತಿದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಓದುವ ಸಂಸ್ಕೃತಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಕನ್ನಡದ ಉಳಿವು ಶಾಲೆಗಳನ್ನು ಅವಲಂಬಿಸಿರುವುದರಿಂದ ಕನ್ನಡ ಶಾಲೆಗಳ ಸಬಲೀಕರಣ ಪ್ರಥಮ ಆದ್ಯತೆಯಾಗಬೇಕು’ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗುರಣ್ಣ ಬಳಗಾನೂರ, ಆರ್.ಎನ್. ಗೋಡಬೋಲೆ, ಶ್ರೀನಿವಾಸ ಹುಯಿಲಗೋಳ, ವಾಸಣ್ಣ ಕುರಡಗಿ, ಫಕ್ಕೀರಪ್ಪ ಹೆಬಸೂರ, ತಯ್ಯಬಅಲಿ ಹೊಂಬಳ, ಎ.ಎಸ್. ಮಕಾನದಾರ, ಎನ್.ಬಿ. ಕಳಸಾಪೂರ, ರಶ್ಮಿ ಅಂಗಡಿ, ಎಸ್.ವಿ. ಗುಂಜಾಳ ಅವರನ್ನು ಸನ್ಮಾನಿಸಲಾಯಿತು.
ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ರಶ್ಮಿ ಅಂಗಡಿ ಸ್ವಾಗತಿಸಿದರು. ರಕ್ಷಿತಾ ಗಿಡ್ನಂದಿ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಪ್ರೊ. ಕೆ.ಎಚ್.ಬೇಲೂರ, ಡಾ. ಜಿ.ಬಿ. ಪಾಟೀಲ, ಅಂದಾನಪ್ಪ ವಿಭೂತಿ, ಸಿ.ಕೆ.ಎಚ್. ಶಾಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.