ADVERTISEMENT

ಕುಮಾರವ್ಯಾಸರು ಪ್ರಯೋಗಶೀಲ ಕವಿ: ಗಡಾದ

ಅಡವೀಂದ್ರ ಸ್ವಾಮಿ ಮಠ: ಗದುಗಿನ ಭಾರತ ವಾಚನ, ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:43 IST
Last Updated 8 ಜನವರಿ 2026, 7:43 IST
ಗದುಗಿನ ಭಾರತ ವಾಚನ- ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವಯ್ಯ ಮದರಿಮಠ ದಂಪತಿಗೆ ಸನ್ಮಾನಿಸಲಾಯಿತು 
ಗದುಗಿನ ಭಾರತ ವಾಚನ- ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವಯ್ಯ ಮದರಿಮಠ ದಂಪತಿಗೆ ಸನ್ಮಾನಿಸಲಾಯಿತು    

ಗದಗ: ‘ಕವಿ ಕುಮಾರವ್ಯಾಸ ಅವರ ಪ್ರಯೋಗಶೀಲತೆ ಹಾಗೂ ಶಬ್ದ ಸೃಷ್ಟಿಯಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ‘ಕರ್ನಾಟಕ ಭಾರತ ಕಥಾಮಂಜರಿ’ ಕೃತಿಯಿಂದ ಕನ್ನಡಿಗರ ಸ್ಮೃತಿಯಲ್ಲಿ ಚಿರಸ್ಥಾಯಿಯಾಗಿ ಉಳಿದು ಗದಗ ಹಾಗೂ ವೀರನಾರಾಯಣನನ್ನು ಭಾರತದ ನಕ್ಷೆಯಲ್ಲಿ ಅಜರಾಮರಗೊಳಿಸಿದ್ದಾರೆ’ ಎಂದು ಅಡವೀಂದ್ರ ಸ್ವಾಮಿಮಠ ಶಿವಾನುಭವ ಸಮಿತಿಯ ಅಧ್ಯಕ್ಷ ರಾಜೇಂದ್ರ ಎಸ್. ಗಡಾದ ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದ ಶಿವಾನುಭವ ಸಮಿತಿಯು ಗದಗ ಜಿಲ್ಲಾ ಸಂಸ್ಕಾರ ಭಾರತಿ ಸಹಯೋಗದಲ್ಲಿ 343ನೇ ಮಾಸಿಕ ಶಿವಾನುಭವದಲ್ಲಿ ಕುಮಾರವ್ಯಾಸ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಗದುಗಿನ ಭಾರತ ವಾಚನ- ವ್ಯಾಖ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕುಮಾರವ್ಯಾಸನ ಗದುಗಿನ ಭಾರತ ಆ ಕಾಲದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಪಡೆದಿತ್ತು. ಶಿವಾಜಿ ಮಹಾರಾಜರ ಕಾಲದಲ್ಲಿದ್ದ ಮಹಾರಾಷ್ಟ್ರದ ಮುಕ್ತೇಶ್ವರ ಎಂಬ ಕವಿಯು ತನ್ನ ಕಾವ್ಯದಲ್ಲಿ ಕುಮಾರವ್ಯಾಸನ ಅನೇಕ ಪದ್ಯಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ್ದನ್ನು ನೋಡಿದರೆ ಕುಮಾರವ್ಯಾಸನ ಭಾರತ ಎಷ್ಟೊಂದು ಜನಪ್ರಿಯ ಗ್ರಂಥವಾಗಿತ್ತು ಎಂಬುದು ವೇದ್ಯವಾಗುತ್ತದೆ’ ಎಂದರು.

ADVERTISEMENT

‘ಜೈಮಿನಿ ಭಾರತವನ್ನು ಬಿಟ್ಟರೆ ಸಮಸ್ತ ಕರ್ನಾಟಕದ ಮೂಲೆ ಮೂಲೆಯಲ್ಲಿ ವಾಚಿಸತಕ್ಕ ವ್ಯಾಖ್ಯಾನಿಸುವ ಜನಪ್ರಿಯ ಗ್ರಂಥ ಇದಾಗಿದೆ. ಗಮಕಿ ವಿಶ್ವನಾಥ ಕುಲಕರ್ಣಿ ಅವರು ಗದುಗಿನ ಭಾರತದಿಂದ ಆಯ್ದ ಭಾಗಗಳನ್ನು ರಸವತ್ತಾಗಿ ಜನಮಾನಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹೇಳಿದರು. 

ಗುರುವಿನಹಳ್ಳಿಯ ಗಮಕಿ ವಿಶ್ವನಾಥ್ ಕುಲಕರ್ಣಿ ಅವರು ಗದುಗಿನ ಭಾರತದ ಮಹಾಕಾವ್ಯದ ಪಾಶುಪತಾಸ್ತ್ರ ಪ್ರದಾನ ಪ್ರಸಂಗವನ್ನ ಆಯ್ದುಕೊಂಡು ವಾಚನ, ವ್ಯಾಖ್ಯಾನ ಮಾಡಿದರು. ಇವರಿಗೆ ಸಂಗೀತ ಶಿಕ್ಷಕ ಶ್ರೀಕಾಂತ ಹೂಲಿ ಸಂವಾದಿನಿ ಸಾಥ್ ನೀಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಬಿ.ಡಿ.ಕಿಲಬನವರ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಟ್ರೋಫಿ ವಿಜೇತ ವೇದಾಂತ ರಾಜು ಸಿಕ್ಕಲಗಾರ ಅವರನ್ನು ಸನ್ಮಾನಿಸಲಾಯಿತು. ಅಡವೀಂದ್ರ ಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಸಾನ್ನಿಧ್ಯ ವಹಿಸಿದ್ದರು. 

ಗೀತಾ ಹೂಗಾರ ಪ್ರಾರ್ಥಿಸಿದರು. ದತ್ತಪ್ರಸನ್ನ ಪಾಟೀಲ ಸ್ವಾಗತಿಸಿದರು. ಜಿ.ಎಂ.ಯಾನಮಶೆಟ್ಟಿ ಪರಿಚಯಿಸಿದರು. ಕಲಾ ಉಪನ್ಯಾಸಕ ಪ್ರಕಾಶ್ ಬಂಡಿ ಕಾರ್ಯಕ್ರಮ ನಿರೂಪಿಸಿದರು. ವೀರೇಶ್ವರ ಸ್ವಾಮಿ ಹೊಸಳ್ಳಿಮಠ ವಂದಿಸಿದರು. 

ಉದ್ಯಮಿ ಎಸ್.ಪಿ.ಸಂಶಿಮಠ, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಪ್ರೊ. ಕೆ.ಎಚ್.ಬೇಲೂರ, ಬಿ.ಎಂ.ಬಿಳೆಯಲಿ, ಸುಧೀರ್ ಸಿಂಹ ಘೋರ್ಪಡೆ, ಪ್ರಭುಗೌಡ ಪಾಟೀಲ, ಗುರಪ್ಪ ನಿಡಗುಂದಿ, ಶಾಂತಾ ಸಂಕನೂರ, ರಾಜೇಶ್ವರಿ ಕಲಾ ಕುಟೀರದ ಸಂಸ್ಥಾಪಕ ಗಜಾನನ ವೇರ್ಣೆಕರ್, ಮಂಜುನಾಥ್ ಕಿಲಬನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.