
ಗದಗ: ‘ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮಳ 201ನೇ ವಿಜಯೋತ್ಸವ, ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಕಾರ್ಯಕ್ರಮ ನ.8ರಂದು ನಡೆಯಲಿದೆ’ ಎಂದು ವಿಜಯೋತ್ಸವ ಸಮಿತಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ತಿಳಿಸಿದರು.
‘ಕಾರ್ಯಕ್ರಮದ ಅಂಗವಾಗಿ ನ.8ರಂದು ಬೆಳಿಗ್ಗೆ 11ಕ್ಕೆ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮ ಮೂರ್ತಿ ಮಾಲಾರ್ಪಣೆ, ಮೆರವಣಿಗೆ ಹಾಗೂ ಮಧ್ಯಾಹ್ನ 3ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೆರವಣಿಗೆಯನ್ನು ಮಾದರಿಯಾಗಿ ಆಚರಿಸುವ ಉದ್ದೇಶದಿಂದ ಡಿಜೆಯನ್ನು ಕೈಬಿಟ್ಟು, ಸಾಂಪ್ರಾಯಿಕ ವಿಧಾನಕ್ಕೆ ಮಹತ್ವ ನೀಡಲಾಗಿದೆ. ಕರಡಿ ಮಜಲು, ನಂದಿಕೋಲು, ಡೊಳ್ಳು ಕುಣಿತ ಮತ್ತು ಮಕ್ಕಳ ಮನಸ್ಸಿಗೆ ಮುದ ನೀಡುವ ಬೊಂಬೆ ಕಲಾವಿದರು ಮೆರವಣಿಗೆಗೆ ಮೆರುಗು ನೀಡುವರು. ಮೆರವಣಿಗೆಯು ಕಿತ್ತೂರ ಚನ್ನಮ್ಮ ಸರ್ಕಲ್‌ನಿಂದ ಆರಂಭವಾಗಿ ಮುಳಗುಂದ ನಾಕಾ, ಕೆಇಬಿ, ಒಕ್ಕಲಗೇರಿ, ಗುಜ್ಜರಬಸ್ತಿ, ಪಂಚರಹೊಂಡ ಮಾರ್ಗವಾಗಿ ಬಸವೇಶ್ವರ ಸರ್ಕಲ್‌ನಲ್ಲಿ ಮುಕ್ತಾಯಗೊಳ್ಳಲಿದೆ’ ಎಂದು ತಿಳಿಸಿದರು.
‘ಮಧ್ಯಾಹ್ನ 3ಕ್ಕೆ ಬಸವೇಶ್ವರ ಸರ್ಕಲ್‌ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಭಾಷಣ ಮಾಡುವರು. ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಭಾಗವಹಿಸುವರು. ಸಮಾಜದ ಮುಖಂಡರಾದ ವಿಜಯ್‌ಕುಮಾರ್ ಗಡ್ಡಿ, ಮೋಹನ ಮಾಳಶೆಟ್ಟಿ, ಬಸವಣ್ಣೆಪ್ಪ ಚಿಂಚಲಿ ಸೇರಿದಂತೆ ಹಲವರು ವೇದಿಕೆ ಹಂಚಿಕೊಳ್ಳುವರು’ ಎಂದು ತಿಳಿಸಿದರು.
ಪಂಚಮಸಾಲಿ ಯುವಕರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೈಕ್ ರ‍್ಯಾಲಿಯ ಮೂಲಕ ವೇದಿಕೆಗೆ ಕರೆತರುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.