ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗಾನೂರ ಗ್ರಾಮದಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಸ್ವಚ್ಛತೆ ಇಲ್ಲದಂತಾಗಿದೆ. ಜೆಜೆಎಂ ಕಾಮಗಾರಿಯಿಂದಾಗಿ ಗ್ರಾಮದ ಸಿಸಿ ರಸ್ತೆಗಳು ಹಾಳಾಗಿವೆ.
ಗ್ರಾಮದಲ್ಲಿ ಜನರು ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿರುವುದರಿಂದ ಚರಂಡಿಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುವುದು ಸಾಮಾನ್ಯವಾಗಿದೆ. ಗ್ರಾಮದ ಖಾಲಿ ನಿವೇಶನ, ಜಾಗಗಳಲ್ಲಿ ಗಿಡ-ಗಂಟಿಗಳು ಬೆಳೆದಿವೆ. ಇದರಿಂದಾಗಿ ಹಾವು-ಚೇಳುಗಳ ಕಾಟ ಹೆಚ್ಚಾಗಿದೆ. ಗ್ರಾಮದಲ್ಲಿನ ನಲ್ಲಿಗಳಿಗೆ ಟ್ಯಾಪ್ ಇಲ್ಲದ ಕಾರಣ ನೀರು ನಿರಂತರವಾಗಿ ಹರಿದು ಪೋಲಾಗುತ್ತಿದೆ.
ಗ್ರಾಮದ ಅಂಗನವಾಡಿಯಿಂದ ರಾಜೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆವರೆಗೆ ಹಾಗೂ ಬಸ್ ನಿಲ್ದಾಣದಿಂದ ನೀರಿನ ಟ್ಯಾಂಕ್‌ವರೆಗೆ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದ ಕಮಲಪ್ಪ ಮಾಳೋತ್ತರ ಅವರ ಮನೆಯಿಂದ ಕಮಲಪ್ಪ ರಾಠೋಡ ಅವರ ಮನೆವರೆಗೆ ನಡುವೆ ಹಾದು ಹೋಗಿರುವ ಮುಖ್ಯ ಚರಂಡಿಯಲ್ಲಿ ಗಿಡ-ಗಂಟಿಗಳು ಬೆಳೆದು ಗಬ್ಬೆದ್ದು ನಾರುತ್ತಿದೆ.
ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದು, ಸೇವಾಲಾಲ ಸಮುದಾಯ ಭವನದ ಹತ್ತಿರ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಮುಗಿದರೂ ಪ್ರಾರಂಭವಾಗಿಲ್ಲ. ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಹ ನಮಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ಬೇರೆ ಕಡೆಯಿಂದ ಶುದ್ಧ ಕುಡಿಯುವ ನೀರು ತಂದು ಕುಡಿಯುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿನ ಚರಂಡಿಗಳನ್ನು 2-3 ದಿನಗಳಲ್ಲಿ ಸ್ವಚ್ಛ ಮಾಡಿಸುತ್ತೇವೆ. ಗ್ರಾಮದ ಮುಖ್ಯ ಚರಂಡಿ ಸ್ವಚ್ಛತೆಗೆ ಕ್ರಿಯಾ ಯೋಜನೆ ಮಾಡಲಾಗಿದೆ. ಆದರೆ ಕೆಲಸ ಆರಂಭವಾಗಿಲ್ಲ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದುನಿರ್ಮಲಾ ಕಲ್ಲಪ್ಪ ಸೊಲಬಗೌಡ್ರ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ರಾಮಾಪುರ
ಕೊಡಗಾನೂರ ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದುಬಿ.ಎನ್.ಇಟಗಿಮಠ ಪಿಡಿಒ ಗ್ರಾಮ ಪಂಚಾಯಿತಿ ರಾಮಾಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.