
ಗದಗ: ‘ತಾಂಡಾ ಹಾಗೂ ಹಟ್ಟಿಗಳ ದಾಖಲೆರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರ ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ.14ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಇದೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
‘ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಉಳಿದಿದ್ದ 49 ಲಕ್ಷ ಜಮೀನುಗಳನ್ನು ಗುರುತಿಸಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಧನವಾಗಿ ₹5 ಕೋಟಿ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದರು.
‘ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ತಹಶೀಲ್ದಾರ್ ಕಚೇರಿಗಳಲ್ಲಿ 10,774 ಅವಧಿ ಮೀರಿದ ಪ್ರಕರಣಗಳಿದ್ದವು. ವಿಶೇಷ ಅಭಿಯಾನ ಹಮ್ಮಿಕೊಂಡು ಅವುಗಳನ್ನು ವಿಲೇವಾರಿ ಮಾಡಲಾಗಿದ್ದು, ಸದ್ಯ 478 ಪ್ರಕರಣ ಮಾತ್ರ ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಸೂಚನೆ ನೀಡಲಾಗಿದೆ’ ಎಂದರು.
ಬಗರ್ ಹುಕುಂ ರೈತರ ಜಮೀನುಗಳ ಸರ್ವೆ ಮತ್ತು ಆರ್.ಟಿ.ಸಿ ಸಮಸ್ಯೆ ನಿವಾರಣೆಗೆ ‘ನನ್ನ ಭೂಮಿ ಅಭಿಯಾನ’ ಆರಂಭಿಸಲಾಗಿದೆ. 2013-18ರ ಅವಧಿಯಲ್ಲಿ 5,842 ಪೋಡಿ ದುರಸ್ತಿ ಆಗಿದ್ದರೆ, 2018-23ರಲ್ಲಿ 8,500 ಪ್ರಕರಣಗಳು ವಿಲೇವಾರಿಯಾಗಿವೆ. ಜನವರಿ 2025ರಿಂದ ಆರಂಭವಾದ ಅಭಿಯಾನದಡಿ ಸದ್ಯ ರಾಜ್ಯದಾದ್ಯಂತ 1,93,615 ಪ್ರಕರಣಗಳಲ್ಲಿ ಸರ್ವೆ ಮತ್ತು ಪೋಡಿ ದುರಸ್ತಿ ನಡೆಯುತ್ತಿದೆ. ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿರುವುದು ಸರ್ಕಾರದ ಬದ್ಧತೆಯ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಹಳೆ ದಾಖಲೆಗಳ ನಕಲಿ ತಡೆಗಟ್ಟಲು ‘ಭೂಸುರಕ್ಷಾ’ ಯೋಜನೆ ಅಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭೂಮಿಯ ಮಾಲೀಕತ್ವಕ್ಕೆ ಗ್ಯಾರಂಟಿ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.