ADVERTISEMENT

ಗದುಗಿನ ಭಾರತ ಶ್ರೇಷ್ಠ ಕೃತಿ: ತೋಂಟದ ಶ್ರೀ

ಕುಮಾರವ್ಯಾಸ ವಿರಚಿತ ‘ಗದುಗಿನ ಭಾರತ’ ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:30 IST
Last Updated 31 ಮಾರ್ಚ್ 2022, 4:30 IST
ಕುಮಾರವ್ಯಾಸ ವಿರಚಿತ ಗದುಗಿನ ಭಾರತ ಕುರಿತ ವಿಚಾರ ಸಂಕಿರಣವನ್ನು ತೋಂಟದ ಸಿದ್ಧರಾಮ ಶ್ರೀಗಳು ಉದ್ಘಾಟಿಸಿದರು. 
ಕುಮಾರವ್ಯಾಸ ವಿರಚಿತ ಗದುಗಿನ ಭಾರತ ಕುರಿತ ವಿಚಾರ ಸಂಕಿರಣವನ್ನು ತೋಂಟದ ಸಿದ್ಧರಾಮ ಶ್ರೀಗಳು ಉದ್ಘಾಟಿಸಿದರು.    

ಗದಗ: ‘ಜನಸಮುದಾಯ ಧರ್ಮ ಮಾರ್ಗದಲ್ಲಿ ನಡೆದು ಉನ್ನತಿಯನ್ನು ಸಾಧಿಸಬೇಕು ಎನ್ನುವ ಮಹದುದ್ದೇಶದಿಂದ ಕುಮಾರವ್ಯಾಸ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿದ್ದಾನೆ. ಧರ್ಮದ ಮೂಲಕ ನಡೆಯುವವರಿಗೆ ಜಯ ಸಿಗುತ್ತದೆ ಎಂಬುದನ್ನು ಮಹಾಕಾವ್ಯದಲ್ಲಿ ಸ್ಪಪ್ಟಪಡಿಸಿದ್ದಾನೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ವೀರನಾರಾಯಣ ದೇವಸ್ಥಾನ ಸಭಾಭವನದಲ್ಲಿ ಏರ್ಪಡಿಸಿದ್ದ ಕವಿ ಕುಮಾರವ್ಯಾಸ ವಿರಚಿತ ‘ಗದುಗಿನ ಭಾರತ’ ಕುರಿತು ವಿಚಾರ ಸಂಕಿರಣ ಹಾಗೂ ಗಮಕ ವಾಚನ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕುಮಾರವ್ಯಾಸ ರೂಪಕಗಳನ್ನು ಅರ್ಥಪೂರ್ಣವಾಗಿ ಬಳಸಿ ಭಾಷಾ ಸೌಂದರ್ಯವನ್ನು ಹೆಚ್ಚಿಸಿದ್ದಾನೆ. ಪಾತ್ರಗಳ ಮೂಲಕ ಧರ್ಮ ಅಧರ್ಮದ ವಿಚಾರಗಳನ್ನು ಸರಳವಾಗಿ ತಿಳಿಸುತ್ತಾ ಕೃಷ್ಣನ ಪಾರಮ್ಯವನ್ನು ಮೆರೆದಿದ್ದಾನೆ. ಜೀವನ ನಿರ್ವಹಣೆಗೆ ಬೇಕಾದ ಎಲ್ಲ ಮಾರ್ಗಗಳನ್ನು ಕುಮಾರವ್ಯಾಸ ಗದುಗಿನ ಭಾರತದಲ್ಲಿ ತಿಳಿಸಿದ್ದಾನೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಾಡಿನ ಶ್ರೇಷ್ಠ ಕವಿ ಕುಮಾರವ್ಯಾಸ ಕರ್ಮಭೂಮಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿ ಹಳಗನ್ನಡ, ನಡುಗನ್ನಡದ ಕಾವ್ಯದ ಬಗ್ಗೆ ಆಸಕ್ತಿಯನ್ನು ಮೂಡಿಸುವ ಅಲ್ಲದೇ ಕಾವ್ಯವನ್ನು ವಾಚನ ಮಾಡುವ ಕಲೆಯನ್ನು ಕೂಡ ರೂಢಿಸುವ ಉದ್ದೇಶ ಹೊಂದಲಾಗಿದೆ. ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ನೆಲದ ಸಾಹಿತ್ಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಕಾರ್ಯವನ್ನು ಪರಿಷತ್ತು ಮಾಡಲಿದೆ’ ಎಂದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ (ಅಭಿವೃದ್ಧಿ)ಎಸ್. ಡಿ. ಗಾಂಜಿ ಮಾತನಾಡಿ, ಗದುಗಿನ ಭಾರತ ಭಾಷಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಅಲಂಕಾರ, ಛಂದಸ್ಸು, ರೂಪಕಗಳನ್ನು ಶಿಕ್ಷಕರು ಸರಿಯಾಗಿ ಅರ್ಥಮಾಡಿಕೊಂಡು ವಿದ್ಯಾರ್ಥಿಗಳಿಗೆ ತಿಳಿಸಿದಾಗ ಹಳಗನ್ನಡ, ನಡುಗನ್ನಡದ ಕಾವ್ಯದಲ್ಲಿ ಆಸಕ್ತಿ ಹುಟ್ಟಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಚ್. ಕಡಿವಾಲ ಮಾತನಾಡಿ, ಜಿಲ್ಲೆಯ ಸಂಗೀತ ಶಿಕ್ಷಕರನ್ನು ಬಳಸಿಕೊಂಡು ಪಠ್ಯದಲ್ಲಿ ಬರುವ ಕವಿತೆಗಳನ್ನು ಶಾಲಾ ಮಕ್ಕಳಿಗೆ ಕಲಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವೀರನಾರಾಯಣ ಹಾಗೂ ತ್ರಿಕೂಟೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಕುಶಾಲ ಗೋಡಖಿಂಡಿ ಮಾತನಾಡಿ, ಕುಮಾರವ್ಯಾಸ ಮತ್ತು ಆತನ ಕೃತಿಯನ್ನು ಇಂದಿನ ತಲೆಮಾರಿನ ಜನರಿಗೆ ಪರಿಚಯಿಸುವ ಕಾರ್ಯ ಸಾಹಿತ್ಯ ಪರಿಷತ್ತಿನಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕುಮಾರವ್ಯಾಸ ವಂಶಸ್ಥರಾದ ಡಾ. ಎಸ್.ಜಿ.ಪಾಟೀಲ ಉಪಸ್ಥಿತರಿದ್ದರು. ಕ್ಷಮಾ ವಸ್ತ್ರದ ನಿರೂಪಿಸಿದರು. ಡಾ. ಶಾಂತಕುಮಾರ ಭಜಂತ್ರಿ ಸ್ವಾಗತಿಸಿದರು. ನೀಲಮ್ಮ ಅಂಗಡಿ ವಂದಿಸಿದರು.

ಕೆ.ಎಚ್.ಬೇಲೂರ, ಡಾ. ಜಿ.ಬಿ.ಪಾಟೀಲ, ಡಾ. ಕೆ.ಯೋಗೇಶನ್, ರಮೇಶ ಕಲ್ಲನಗೌಡರ, ಎಸ್.ಯು.ಸಜ್ಜನಶೆಟ್ಟರ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಈರಣ್ಣ ಮಾದರ, ಶಿವಾನಂದ ಭಜಂತ್ರಿ, ಬಸವರಾಜ ಗಿರಿತಮ್ಮಣ್ಣವರ, ಅನಿಲ ವೈದ್ಯ, ದತ್ತಪ್ರಸನ್ನ ಪಾಟೀಲ, ಗುರುಮೂರ್ತಿ ದೇಶಪಾಂಡೆ, ರವೀಂದ್ರ ಜೋಶಿ, ಕೃಷ್ಣಾಜಿ ನಾಡಿಗೇರ, ಮಂಜುಳಾ ವೆಂಕಟೇಶಯ್ಯ, ನವೀನ ಅಳವಂಡಿ, ಗಿರೀಶ ಕೋಡಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.