ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದಲ್ಲಿ ಮುಖ್ಯ ಚರಂಡಿಗಳಲ್ಲಿ ಹೂಳು ತುಂಬಿಕೊಂಡು, ಗಿಡ-ಕಂಟಿಗಳು ಬೆಳೆದಿದ್ದು, ಗ್ರಾಮದಲ್ಲಿರುವ ಖಾಲಿ ಜಾಗಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿವೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು, ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಕುಂಟೋಜಿ, ವದೇಗೋಳ, ಜಿಗೇರಿ, ಗೌಡಗೇರಿ, ಬೆಣಸಮಟ್ಟಿ, ಮ್ಯಾಕಲಝರಿ ಗ್ರಾಮಗಳು ಒಳಪಡುತ್ತವೆ. ಕುಂಟೋಜಿ ಗ್ರಾಮಕ್ಕೆ ಪ್ರವೇಶಿಸುವ ರಸ್ತೆಗಳಲ್ಲಿ ಕಸದ ರಾಶಿ ಬಿದ್ದಿದ್ದು, ಗ್ರಾಮದಲ್ಲಿರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಅಲ್ಲಲ್ಲಿ ಗಿಡ-ಕಂಟಿಗಳು ಬೆಳೆದು ನಿಂತಿವೆ. ಕುಂಟೋಜಿ ಗ್ರಾಮದ ಬಸ್ ನಿಲ್ದಾಣದಿಂದ ವದೇಗೋಳ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ವರೆಗಿನ ಸಿಸಿ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟದಿಂದ ಸಂಪೂರ್ಣ ಹಾಳಾಗಿದ್ದು, ಜನರು ಓಡಾಡುವುದು ದುಸ್ತರವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳು ಉದ್ಘಾಟನೆ ಆದಾಗಿನಿಂದಲೂ ಬಂದ್ ಆಗಿದ್ದು, ಗ್ರಾಮಸ್ಥರು ನಲ್ಲಿ ನೀರನ್ನೇ ಅವಲಂಭಿಸುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
‘ಬ್ಯಾರೆ ಊರಾಗ ಸಮುದಾಯ ಭವನ, ಅಂಗನವಾಡಿ, ಗ್ರಂಥಾಲಯ, ಆಸ್ಪತ್ರೆ ಹೀಗೆ ಒಂದಿಲ್ಲೊಂದು ಸಾರ್ವಜನಿಕರಿಗೆ ಅನುಕೂಲವಾಗುವಂತ ಕಟ್ಟಡ ಕಟ್ಟಲು ಗೌಂಠಾಣ ಜಾಗ ಹುಡುಕ್ತಾರ. ಆದ್ರ ನಮ್ಮ ಊರಾಗ ಗೌಂಠಾಣ ಜಾಗ ಇದ್ರೂ ಪಂಚಾಯ್ತಿಯವ್ರಿಗೆ ಅದಕ ಒಂದಿಷ್ಟು ಮಣ್ಣ ಹಾಕಿ ನೀರು ನಿಂದ್ರಲಾರದಂಗ ಮಾಡಕ ಆಗವಲ್ದು. ಪಂಚಾಯ್ತಿಗೆ ಬಂದಿದ್ದೇಲ್ಲ ಅವ್ರೀಗೆ ತಿನ್ನಾಕ ಸಾಲಂಗಿಲ್ಲ. ಇನ್ನ ಇಂತ ಜನ್ರಿಗೆ ಅನುಕೂಲ ಆಗುವಂತ ಕೆಲಸಕ್ಕೆ ರೊಕ್ಕ ಸಾಲುತ್ತ ಹೇಳ್ರಿʼ ಎಂದು ಗ್ರಾಮಸ್ಥರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
‘ಗ್ರಾಮದಲ್ಲಿ ಸ್ವಚ್ಛತೆ ಇಲ್ಲ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಿಲ್ಲ. ಗ್ರಾಮ ಪಂಚಾಯ್ತಿಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನೀರು ಮತ್ತು ನೈರ್ಮಲ್ಯ ಹಾಗೂ ಇತರೆ ಕೆಲಸಗಳ ಹೆಸರಿನಲ್ಲಿ ಸುಮಾರು ₹18.57 ಲಕ್ಷ ಖರ್ಚು ಹಾಕಿದ್ದಾರೆ. ಆದರೆ ಗ್ರಾಮಗಳಲ್ಲಿ ನೈರ್ಮಲ್ಯತೆ ಇಲ್ಲದಂತಾಗಿದೆʼ ಎಂದು ಕುಂಟೋಜಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚನ್ನಬಸಯ್ಯ ನಾಗಯ್ಯ ಕಾರಡಗಿಮಠ ಆರೋಪಿಸಿದರು.
ಕೊಳಚೆ ನೀರು ಸಂಗ್ರಹ
ಗ್ರಾಮದ ಅಗಸಿ ಎದುರಿನ ಸರ್ಕಾರಿ ಜಾಗೆದಲ್ಲಿ ಜನರು ತಿಪ್ಪೆ ಗುಂಡಿಗಳನ್ನು ನಿರ್ಮಿಸಿದ್ದು ಮಳೆಗಾಲದಲ್ಲಿ ಮಳೆ ನೀರು ಹಾಗೂ ಗ್ರಾಮದಲ್ಲಿನ ಕೊಳಚೆ ನೀರು ಇದರಲ್ಲಿ ಶೇಖರಣೆಯಾಗುತ್ತಿದೆ. ಇದರಿಂದ ಈ ಜಾಗೆ ಕೆರೆಯಂತಾಗಿದ್ದು ರೋಗಕಾರಕ ಕೀಟಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿದೆ. ಈ ಭಾಗದ ಜನರಲ್ಲಿ ಡೆಂಗಿ ಮಲೇರಿಯಾದಂತ ರೋಗಗಳ ಭೀತಿ ಎದುರಾಗಿದೆ. ಅಲ್ಲದೆ ಈ ಜಾಗೆಯ ಪಕ್ಕದಲ್ಲಿಯೇ ಅಂಗನವಾಡಿ ಇದ್ದು ಚಿಕ್ಕ ಮಕ್ಕಳು ಆಟವಾಡುವಾಗ ಕೊಳಚೆ ನೀರಿನಲ್ಲಿ ಬಿದ್ದರೆ ಅಥವಾ ವಿಷಜಂತುಗಳ ಕಡಿತಕ್ಕೆ ಒಳಗಾದರೆ ಯಾರು ಜವಾಬ್ದಾರರು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಸ್ವಚ್ಛತೆ ಕಾಪಾಡಿಕೊಳ್ಳಲು ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಮೆಲಾತಿನ್ ಪೌಡರ್ ಸಿಂಪಡಿಸಲಾಗಿದೆ. ಶೀಘ್ರದಲ್ಲಿಯೇ ಫಾಗಿಂಗ್ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.ಎಂ.ಯು.ತಳವಾರ, ಪಿಡಿಓ, ಕುಂಟೋಜಿ
ಕುಂಟೋಜಿ ಗ್ರಾಮದಲ್ಲಿ ಬೀದಿ ದೀಪಗಳು ಹಗಲಲ್ಲೂ ಉರಿಯುತ್ತಿರುತ್ತವೆ. ಅವುಗಳ ನಿರ್ವಹಣೆ ಮಾಡಬೇಕಾದ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆಶ್ರೀಶೈಲ ಎಂ. ಕುಂಬಾರ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.