ADVERTISEMENT

ರೋಣ: ರೈತರ ಉಪಯೋಗಕ್ಕೆ ಬಾರದ ಕೃಷಿ ಉತ್ಪನ್ನ ಮಾರುಕಟ್ಟೆ

ಮೂಲಸೌಕರ್ಯ, ಸಿಬ್ಬಂದಿ ಕೊರತೆ: ರೈತರಿಗೆ ಇದ್ದೂ ಇಲ್ಲದಂತಾದ ಎಪಿಎಂಸಿಗಳು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 5:23 IST
Last Updated 19 ಫೆಬ್ರುವರಿ 2024, 5:23 IST
ಬಯಲು ಬಹಿರ್ದೆಸೆಯ ತಾಣವಾದ ಹೊಳೆಆಲೂರ ಎಪಿಎಂಸಿ
ಬಯಲು ಬಹಿರ್ದೆಸೆಯ ತಾಣವಾದ ಹೊಳೆಆಲೂರ ಎಪಿಎಂಸಿ   

ರೋಣ: ರೈತರು ಬೆಳೆದ ಫಸಲು ಮಾರಾಟ ಮಾಡಲು ಮತ್ತು ದಳ್ಳಾಳಿಗಳ ಲಾಭಕೋರತನ ತಡೆಹಿಡಿಯುವ ಉದ್ದೇಶದಿಂದ ಸ್ಥಾಪಿತವಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ರೈತರ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿವೆ.

ರೋಣ ಕೃಷಿ ಪ್ರಧಾನ ತಾಲ್ಲೂಕಾಗಿದ್ದು ಹೆಸರು, ಗೋವಿನಜೋಳ, ಕಡಲೆ, ಬಿಳಿಜೋಳ, ಕೆಂಜೋಳ ಸೇರಿದಂತೆ ವಿವಿಧ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಅದೇರೀತಿ ಶೇಂಗಾ‌, ಕುಸುಬೆ, ಸೂರ್ಯಕಾಂತಿ ಸೇರಿದಂತೆ ಎಣ್ಣೆಕಾಳುಗಳನ್ನು ಹೇರಳವಾಗಿ ಉತ್ಪಾದಿಸಲಾಗುತ್ತದೆ. ಜತೆಗೆ ಈರುಳ್ಳಿ, ಮೆಣಸಿನಕಾಯಿಯಂತಹ ತೋಟಗಾರಿಕೆಯ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ.

ಹೊಳೆಆಲೂರ ಎಪಿಎಂಸಿ ಕಚೇರಿ

ರೈತರ ಫಸಲಿಗೆ ಉತ್ತಮ ಬೆಲೆ ದೊರಕಿಸಿ, ಮಧ್ಯವರ್ತಿಗಳ ಹಾವಳಿ ನಿಯಂತ್ರಿಸುವ ಜೊತೆಗೆ ತೂಕದಲ್ಲಿ ರೈತರಿಗೆ ಆಗುವ ಮೋಸ ತಡೆಯುವಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ಪ್ರಮುಖ ಪಾತ್ರವಹಿಸುತಿದ್ದವು. ಆದರೆ, ದುರದೃಷ್ಟ ಎಂಬಂತೆ ರೋಣ ತಾಲ್ಲೂಕಿನ ಎಪಿಎಂಸಿಗಳು ಮಾತ್ರ ಪಾಳುಬಿದ್ದ ಕೊಂಪೆಯಂತಾಗಿದ್ದು ಕೃಷಿ ಉತ್ಪನ್ನ ಮಾರಾಟವಾಗಬೇಕಿದ್ದ ಜಾಗಗಳೀಗ ಕುಡುಕರು, ಪುಂಡು ಪೋಕರಿಗಳ ತಾಣವಾಗಿವೆ. ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿವೆ.

ADVERTISEMENT

ರೋಣ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಕೃಷಿ ಉತ್ಪನ್ನ ಹೊಂದಿದ್ದ ಹೊಳೆಆಲೂರನ್ನು ಅಂದಿನ ದಿನಮಾನಗಳಲ್ಲಿ ಗುರುತಿಸಿ ಕೇಂದ್ರ ಸ್ಥಾನವನ್ನಾಗಿ ಮಾಡಲಾಯಿತು. ಅದರ ಅಧೀನಕ್ಕೆ ರೋಣ ಮತ್ತು ಹೊಸ ತಾಲ್ಲೂಕಾದ ಗಜೇಂದ್ರಗಡದ ಎಪಿಎಂಸಿಗಳನ್ನು ಉಪಕೇಂದ್ರಗಳನ್ನಾಗಿ ರಚಿಸಿದ್ದು ಸದ್ಯದ ರೋಣ ನಗರದ ಉಪಕೇಂದ್ರ ಸ್ಥಾಪನೆಯಾದ ದಿನದಿಂದ ಇಂದಿನವರೆಗೂ ಪ್ರಾಂಗಣದಲ್ಲಿ ವ್ಯಾಪಾರ ಚಟುವಟಿಕೆ ನಡೆಸಿಲ್ಲ. ಇತ್ತಿಚೆಗೆ ರೋಣ ಉಪಕೇಂದ್ರದಲ್ಲಿ ಮಳಿಗೆಗಳನ್ನು ತೆರೆಯಲಾಗಿದ್ದರೂ ಟೆಂಡರ್ ಪ್ರಕ್ರಿಯೆ ಆಧಾರಿತ ಚಟುವಟಿಕೆಗಳು ಮಾತ್ರ ಪ್ರಾರಂಭವಾಗಿಲ್ಲ.

ಸ್ಥಾಪಿಸಿದಾಗಿಂದ ಇಲ್ಲಿಯವರೆಗೆ ಕೆಲಸ ನಿರ್ವಹಿಸದೆ ಕೆಟ್ಟು ನಿಂತಿರುವ ಹೊಳೆಆಲೂರ ಎಪಿಎಂಸಿ ವೇಬ್ರಿಜ್

ಇನ್ನುಳಿದಂತೆ ಹೊಳೆಆಲೂರ ಎಪಿಎಂಸಿ ಕೆಲವು ವರ್ಷಗಳವರೆಗೆ ವ್ಯಾಪಾರ ನಡೆಸಿದರೂ ಇತ್ತೀಚಿನ ದಿನಗಳಲ್ಲಿ ಉತ್ಪನ್ನಗಳ ಮಾರಾಟ ಕಡಿಮೆಯಾಗಿದ್ದು, ಮೂಲಸೌಲಭ್ಯಗಳ ಕೊರತೆಯ ಜೊತೆಗೆ ಸರ್ಕಾರದ ಇತ್ತೀಚಿನ ನಿಯಮಗಳು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ರೋಣ ಎಪಿಎಂಸಿ ಕಚೇರಿ

ಎಪಿಎಂಸಿಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಬೇಕಾದ ಆಡಳಿತ ವರ್ಗ, ಸದ್ಯ ಅವಧಿ ಪೂರ್ಣಗೊಳಿಸಿ ಅಂದಾಜು ಎರಡು ವರ್ಷಗಳೇ ಕಳೆದರೂ ರಾಜ್ಯ ಸರ್ಕಾರ ಎಪಿಎಂಸಿ ಚುನಾವಣೆ ನಡೆಸದಿರುವುದರಿಂದ ಮಾರುಕಟ್ಟೆಗಳು ಅಧಿಕಾರಿಗಳ ನಿಯಂತ್ರಣದಲ್ಲಿದ್ದು ಅಭಿವೃದ್ದಿ ಕಾರ್ಯಗಳಿಗೆ ಗ್ರಹಣ ಬಡಿದಂತಾಗಿದೆ.

ರೋಣ ಎಪಿಎಂಸಿ ಪ್ರಾಂಗಣದಲ್ಲಿ ಕುಡಿದು ಎಸೆದಿರುವ ಮದ್ಯದ ಪ್ಯಾಕೇಟ್‌ಗಳು

ತಾಲ್ಲೂಕಿನ ಬಹುತೇಕ ರೈತರು ಕಾಳುಕಡಿ ಮಾರಾಟಕ್ಕೆ ಜಿಲ್ಲಾ ಕೇಂದ್ರವಾದ ಗದಗ ಎಪಿಎಂಸಿಯನ್ನೇ ಅವಲಂಬಿಸಿದ್ದಾರೆ. ಈರುಳ್ಳಿ ಮಾರಾಟಕ್ಕೆ ಹುಬ್ಬಳ್ಳಿ, ಪುಣೆ, ಬೆಂಗಳೂರು, ಹೈದರಾಬಾದ್‌ ಮಾರುಕಟ್ಟೆಗಳಿಗೆ ತೆರಳುತ್ತಿದ್ದಾರೆ. ಒಣಮೆಣಸಿನಕಾಯಿ ಮಾರಾಟಕ್ಕೆ ಹುಬ್ಬಳ್ಳಿ, ಬ್ಯಾಡಗಿಯಂತಹ ದೂರದ ಮಾರುಕಟ್ಟೆಗೆ ತೆರಳಬೇಕಾಗಿದ್ದು, ದುಬಾರಿ ಬಾಡಿಗೆ ತೆರಬೇಕಾಗಿದೆ. ಇಂತಹ ಹತ್ತಾರು ಸಮಸ್ಯೆಗಳಿಂದಾಗಿ ಸ್ಥಳೀಯ ಎಪಿಎಂಸಿಗಳು ರೈತರಿಗೆ ಇದ್ದೂ ಇಲ್ಲದಂತಾಗಿವೆ.

ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳವಾದ ರೋಣ ಎಪಿಎಂಸಿ ಆವರಣ
ಬಿ.ಸಿ.ಸುಂಕದ

ಯಾರು ಏನಂತಾರೆ?

ಸಿಬ್ಬಂದಿ ಕೊರತೆ ನೀಗಿಸಿ- ಎಪಿಎಂಸಿಗಳಲ್ಲಿ ಮೊದಲಿನಿಂದಲೂ ಸಿಬ್ಬಂದಿ ಕೊರತೆ ಇದೆ ಹೀಗಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡಿದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬಹುದು
–ಬಿ.ಸಿ.ಸುಂಕದ ಮಾಜಿ ಅಧ್ಯಕ್ಷರು ಹೊಳೆಆಲೂರ-ರೋಣ ಎಪಿಎಂಸಿ
ಎಪಿಎಂಸಿ ರೈತಸ್ನೇಹಿಯಾಗಲಿ- ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದ ಹೊರಗೆ ಮಾರಲು ಕಾನೂನು ತಂದಿದ್ದು ಎಪಿಎಂಸಿಗಳಿಗೆ ಮಾರಕವಾಗಿದೆ. ಮೊದಲಿನ ಹಾಗೆ ಅಧಿಕಾರ ನೀಡಿದಲ್ಲಿ ಎಪಿಎಂಸಿಗಳು ಆರ್ಥಿಕವಾಗಿ ಸಶಕ್ತಗೊಳ್ಳುವುದರ ಜತೆಗೆ ರೈತರಿಗೂ ಅತಿ ಹೆಚ್ಚಿನ ಮಟ್ಟದಲ್ಲಿ ಅನುಕೂಲವಾಗಲಿದೆ
–ಪಿ.ಬಿ.ಅಳಗವಾಡಿ ಮಾಜಿ ಅಧ್ಯಕ್ಷರು ಎಪಿಎಂಸಿ ಹೊಳೆಆಲೂರ- ರೋಣ.
ದೊಡ್ಡಬಸಪ್ಪ ನವಲಗುಂದ
ಇ–ಟೆಂಡರ್‌ ಖರೀದಿ ಆರಂಭಿಸಿ- ರೋಣ ಭಾಗದಲ್ಲಿ ಎಪಿಎಂಸಿ ಪ್ರಾರಂಭವಾಗಿ ಹಲವು ದಶಕಗಳು ಉರುಳಿದರು ಇ– ಟೆಂಡರ್ ಮೂಲಕ‌ ಖರೀದಿಯಾಗದಿರುವುದರಿಂದ ನಮ್ಮ ರೈತರು ದುಬಾರಿ ಬಾಡಿಗೆ ನೀಡಿ ಹಸಿದ ಹೊಟ್ಟೆಯಲ್ಲಿ ದೂರದ ಊರುಗಳು ಎಪಿಎಂಸಿಗಳಿಗೆ ಅಲೆಯುವಂತಾಗಿದೆ
–ದೊಡ್ಡಬಸಪ್ಪ ನವಲಗುಂದ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ರೈತ ಸಂಘ ರೋಣ ತಾಲ್ಲೂಕ ಘಟಕ.
ಮಾರುತಿ ಮಂಡಸೊಪ್ಪಿ
ಮೂಲಸೌಕರ್ಯ ಕಲ್ಪಿಸಲಿ- ಹೊಳೆಆಲೂರ ಮತ್ತು ರೋಣ ಎಪಿಎಂಸಿಗಳು ಮೂಲಸೌಲಭ್ಯದಿಂದ ವಂಚಿತವಾಗಿದ್ದು ಎಪಿಎಂಸಿ ಕೇಂದ್ರ ಸ್ಥಾನವಾದ ಹೊಳೆಆಲೂರಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಶೌಚಾಲಯವಿಲ್ಲ. ಇದ್ದ ಒಂದು ಉಪಾಹಾರ ಗೃಹ ಶಿಥಿಲಾವಸ್ಥೆ ತಲುಪಿದೆ. ವೇಬ್ರಿಜ್ ಅಳವಡಿಸಿ ಹಲವು ವರ್ಷಗಳೇ ಕಳೆದರೂ ಒಂದು ದಿನವೂ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ರೈತರು ಎಪಿಎಂಸಿಯಿಂದ ದೂರ ಹೋಗುತ್ತಿದ್ದಾರೆ
–ಮಾರುತಿ ಮಂಡಸೊಪ್ಪಿ ಉಪಾಧ್ಯಕ್ಷರು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹೊಳೆಆಲೂರ.
ಪುನಃಶ್ಚೇತನಕ್ಕೆ ದಾರಿ- ನಾನು ಸದ್ಯ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗಿದೆ. ನಿನ್ನೆಯ ಬಜೆಟ್ ಎಪಿಎಂಸಿ ಪುನಃಶ್ಚೇತನಕ್ಕೆ ದಾರಿ ಮಾಡಿದ್ದು ಮುಂದಿನ ಎರಡ್ಮೂರು ತಿಂಗಳೊಳಗೆ ರೋಣ ಎಪಿಎಂಸಿಯಲ್ಲಿ ಇ– ಟೆಂಡರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು
–ತಮ್ಮಣ್ಣ ಉನ್ನಿಭಾವಿ ಕಾರ್ಯದರ್ಶಿ ಎಪಿಎಂಸಿ ಹೊಳೆಆಲೂರ
ಹಳೆಯ ವೈಭವ ಮರಳಲಿ...
ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಯಿಂದಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ಕಳೆಗುಂದಿದ್ದವು. ಅವುಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ರಚಿಸಿದ್ದ ಪರಿಶೀಲನಾ ಸಮಿತಿಯ ವರದಿ ಸದನದಲ್ಲಿ ಮಂಡನೆಯಾಗಿದೆ. ಎಪಿಎಂಸಿಗಳನ್ನು ರೈತಸ್ನೇಹಿ ಆಗಿಸುವ ನಿಟ್ಟಿನಲ್ಲಿ ಸಮಿತಿಯು 27 ಶಿಫಾರಸುಗಳನ್ನು ಮಾಡಿದ್ದು ಅವು ಜಾರಿ ಆದರೆ ಎಪಿಎಂಸಿಗಳಲ್ಲಿ ಹಳೆಯ ವೈಭವ ಮರಳಲಿದೆ ಎನ್ನುತ್ತಾರೆ ಮಾರುತಿ ಮಂಡಸೊಪ್ಪಿ. ಎಪಿಎಂಸಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಬೇಗ ಭರ್ತಿ ಮಾಡಬೇಕು. ಎಪಿಎಂಸಿಯ ಎಲ್ಲ ಚಟುವಟಿಕೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸುವಂತಾಗಬೇಕು. ಎಪಿಎಂಸಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನೆರವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ರೈತರೇ ಎಪಿಎಂಸಿ ಒಳಗೆ ನೇರವಾಗಿ ಮಾರಾಟ– ಖರೀದಿ ಮಾಡಲು ಪ್ರೋತ್ಸಾಹಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.