ADVERTISEMENT

ಕ್ರಶರ್‌ ಹಾವಳಿ, ಕುಸಿದ ಅಂತರ್ಜಲ: ಸಮಸ್ಯೆ ಸುಳಿಯಲ್ಲಿ ಚಿಕ್ಕಸವಣೂರು

ಮೂಲಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 5:27 IST
Last Updated 21 ಮಾರ್ಚ್ 2024, 5:27 IST
ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದಲ್ಲಿನ ಅವೈಜ್ಞಾನಿಕ ಚರಂಡಿ ಮತ್ತು ರಸ್ತೆ ನಿರ್ಮಾಣದಿಂದ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿರುವುದು
ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದಲ್ಲಿನ ಅವೈಜ್ಞಾನಿಕ ಚರಂಡಿ ಮತ್ತು ರಸ್ತೆ ನಿರ್ಮಾಣದಿಂದ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿರುವುದು   

ಶಿರಹಟ್ಟಿ: ‘ನಮ್ಮ ಊರಿನ ಆಜು-ಬಾಜು ಕ್ರಶರ್ ಚಾಲೂ ಮಾಡ್ದಾಗಿಂದ ನಮ್ಮ ಹೊಲ್ದಾಂಗಿಂದ್ ಬೊರ ಕುಸ್ಯಾಕಹತ್ಯಾವು. ಸಾಲ ಮಾಡಿ ಬಿತ್ತಿದ ಬೀಜ ಬರ್ದಂಗ ಈ ಹಾಳಾದ ಕ್ರಶರ್ಸ್‌ ದೂಳ್ ಬೆಳಿನ ಮ್ಯಾಲ ಕುಂತ ಪೀಕ ಬರದಂಗ ಆಗೈತಿ. ಇದರಿಂದ ದಿನಾ ನಾವು ದೂಳಿನ ಕೂಳು ತಿನ್ನೋ ಪರಿಸ್ಥಿತಿ ಬಂದೈತಿ’ ಎಂಬುವುದು ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ರೈತರ ಗೋಳು.

ತಾಲ್ಲೂಕಿನ ಗಡಿಯಲ್ಲಿರುವ ಚಿಕ್ಕ ಸವಣೂರು ಗ್ರಾಮವು ಕೊಂಚಿಗೇರಿ ಗ್ರಾಮ ಪಂಚಾಯ್ತಿಗೆ ಒಳಪಡುತ್ತಿದ್ದು, ಇಬ್ಬರು ಗ್ರಾಮ ಪಂಚಾಯ್ತಿ ಸದಸ್ಯರನ್ನು ಒಳಗೊಂಡಿದೆ. ಸುಮಾರು 650 ಜನಸಂಖ್ಯೆ ಇರುವ ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ, ರಸ್ತೆ ನಿರ್ಮಾಣ, ಶೌಚಾಲಯ ಕೊರತೆ, ಗ್ರಂಥಾಲಯ ಸೇರಿದಂತೆ ಗ್ರಾಮದ ಸುತ್ತಮುತ್ತ ಇರುವ ಅಕ್ರಮ ಗಣಿಗಾರಿಕೆಯಿಂದ ಗ್ರಾಮಸ್ಥರು ಅಕ್ಷರಶಃ ಬೇಸತ್ತು ಹೋಗಿದ್ದಾರೆ.

ಬತ್ತಿರುವ ಕೊಳವೆಬಾವಿ: ಚಿಕ್ಕಸವಣೂರು ಗ್ರಾಮದ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ರೈತರ ಹೊಲದಲ್ಲಿನ ಕೊಳವೆಬಾವಿಗಳು ಕುಸಿಯುತ್ತಿವೆ. ನಿತ್ಯ ನಡೆಯುವ ಬ್ಲಾಸ್ಟಿಂಗ್‌ನಿಂದ ಅಂತರ್ಜಲಮಟ್ಟ ಕುಸಿದು ಬಹುತೇಕ ರೈತರ ಬೊರ್‌ವೆಲ್‌ಗಳು ಬಂದ್ ಆಗಿವೆ. ಅಲ್ಲದೇ ಹರಸಾಹಸದೊಂದಿಗೆ ರೈತರು ಬೀಜ ಬಿತ್ತನೆ ಮಾಡಿದರೆ, ಬೆಳೆಗಳ ಮೇಲೆ ಕ್ರಶರ್ಸ್‌ನ ದೂಳು ಕುಳಿತು ಬೆಳೆಯ ಬೆಳವಣಿಗೆಗೆ ಕಂಠಕವಾಗುತ್ತಿದೆ. ಇಂತಹ ದೂಳಿನ ಮಜ್ಜನದಲ್ಲಿಯೇ ಬೆಳೆದ ಅಲ್ಪ ಸ್ವಲ್ಪ ಫಸಲನ್ನು ಕಟಾವು ಮಾಡಿ ಮನೆಗೆ ಕೊಂಡ್ಯೊಯ್ಯಲಾಗುತ್ತಿದ್ದು, ರೈತರಿಗೆ ದೂಳಿನ ಕೂಳನ್ನು ತಿನ್ನುವ ದುಃಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಅವಲತ್ತುಕೊಂಡಿದ್ದಾರೆ.

ADVERTISEMENT

ರಾಜಧನ ದುರುಪಯೋಗ:  ಯಾವುದೇ ಒಂದು ಬೃಹತ್ ಕೈಗಾರಿಕೆ ನಡೆಯುವ ಪ್ರದೇಶದಿಂದ ಪರವಾನಗಿ ಪಡೆದುಕೊಂಡ ನಂತರ ಕೈಗಾರಿಕೆಯಿಂದ ಶೇಖರಣೆಯಾಗುವ ರಾಜಧನವನ್ನು ಅದೇ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂಬ ನಿಯಮವಿದೆ. ಆದರೆ ಇಂತಹ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿಂದ ಶೇಖರಣೆಯಾಗುವ ರಾಜಧನವನ್ನು ಕೆಲವು ರಾಜಕೀಯ ಹಾಗೂ ಇನ್ನಿತರ ಪ್ರಭಾವಕ್ಕೆ ಒಳಗಾಗಿ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದರಿಂದ ಗ್ರಾಮದ ಅಭಿವೃದ್ಧಿ ಕುಂಠಿವಾಗುತ್ತಿದ್ದು, ಇತ್ತ ಪಂಚಾಯ್ತಿ ವತಿಯಿಂದಲೂ ಅಭಿವೃದ್ಧಿ ಕಾಣದೇ ಗ್ರಾಮಸ್ಥರು ನಿತ್ಯ ಸಮಸ್ಯೆಗಳೊಡನೆ ಜೀವನ ನಡೆಸುತ್ತಿದ್ದಾರೆ.

ಗ್ರಂಥಾಲಯದ ಬೇಡಿಕೆ: ಗ್ರಾಮದಲ್ಲಿನ ಶಾಲಾ ಮಕ್ಕಳಿಗೆ ಓದಲು ಒಂದು ಗ್ರಂಥಾಲಯದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಸತತ ಅಭ್ಯಾಸದಲ್ಲಿ ತೊಡಗಲು ಗ್ರಾಮಕ್ಕೆ ಸುಸಜ್ಜಿತ ಗ್ರಂಥಾಲಯದ ಬೇಕಿದೆ.

ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ವಹಿಸಿ ಗ್ರಂಥಾಲಯ ಮಂಜೂರು ಮಾಡುವ ಮೂಲಕ ಗ್ರಾಮದ ಮಕ್ಕಳ ಗುಣಮಟ್ಟದ ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಅಳಿಯದ ಬಯಲು ಶೌಚ ಪದ್ಧತಿ: ಗ್ರಾಮದಲ್ಲಿ ಬಯಲು ಶೌಚ ನಿಲ್ಲಿಸಲು ಪಂಚಾಯ್ತಿ ವತಿಯಿಂದ ಕೆಲವರಿಗೆ ಮಾತ್ರ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಸಹಾಯಧನ ನೀಡಲಾಗಿದೆ. ಅಲ್ಲದೇ ಗ್ರಾಮದಲ್ಲಿ ಒಂದೇ ಒಂದು ಮಹಿಳಾ ಸಮುದಾಯ ಶೌಚಾಲಯ ಇಲ್ಲ. ಪಂಚಾಯ್ತಿಯ ಜಾಗೃತಿ ಕೊರತೆಯಿಂದ ಗ್ರಾಮದ ಹೊರವಲಯದ ಗಿಡಗಂಟಿಗಳ ಮರೆಯಲ್ಲಿ ಬಯಲುಶೌಚ ಮಾಡುವ ಪರಿಸ್ಥಿತಿ ಇದೆ ಎಂದು ಮಹಿಳೆಯರು ನೋವು ತೋಡಿಕೊಂಡರು.

ಚಿಕ್ಕಸವಣೂರು ಗ್ರಾಮದ ಸುತ್ತಲಿನ ಕ್ರಶರ್‌ಗಾಗಿ ನಡೆಯುತ್ತಿರುವ ಸ್ಫೋಟದಿಂದ ಕೊಳವೆಬಾವಿಗಳ ಅಂತರ್ಜಲ ಬತ್ತಿ ಹೋಗಿ ಬಹುತೇಕ ಬಂದ್‌ ಆಗಿವೆ

ರೋಗಗಳಿಗೆ ತುತ್ತಾಗುತ್ತಿರುವ ಗ್ರಾಮಸ್ಥರು

ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿಗಳಿಂದ ಮಳೆ ನೀರು ಹಾಗೂ ಮನೆಯಲ್ಲಿನ ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಇದು ಸಾಂಕ್ರಾಮಿಕ ರೋಗಗಳನ್ನು ಅಹ್ವಾನಿಸುತ್ತಿವೆ. ವಾರ್ಡ್‌ನ ಸಂದಿಗಳ ಚಿಕ್ಕ ರಸ್ತೆಯ ಮಧ್ಯೆದಲ್ಲಿಯೇ ಚಿಕ್ಕ ಚರಂಡಿ ನಿರ್ಮಿಸಿದ್ದು ನಿರ್ವಹಣೆ ಕೊರತೆಯಿಂದ ಸಂಜೆಯಾಗುತ್ತಿದಂತೆ ಸೊಳ್ಳೆಕಾಟದಿಂದ ಜನರು ನೆಮ್ಮದಿಯ ನಿದ್ರೆ ಮಾಡಲು ಆಗುತ್ತಿಲ್ಲ. ಇದರಿಂದ ಮಲೇರಿಯಾ ಡೆಂಗಿ ಜ್ವರದಿಂದ ಮಕ್ಕಳು ಸೇರಿ ವಯೋವೃದ್ದರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಲ್ಲಿನ ಕ್ವಾರಿಯ ಬ್ಲಾಸ್ಟಿಂಗ್‌ನಿಂದ ಬರುವ ವಿಷಕಾರಕ ದೂಳಿನಿಂದ ಭಯಾನಕ ರೋಗಕ್ಕೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ.

ದೇವಸ್ಥಾನದ ಅಭಿವೃದ್ಧಿಗೆ ಆಗ್ರಹ

ಜಿಲ್ಲೆಯಲ್ಲಿಯೇ ಏಕೈಕ ದೇವಸ್ಥಾನ ಎಂದೇ ಖ್ಯಾತಿ ಪಡೆದ ಚಿಕ್ಕಸವಣೂರು ಗ್ರಾಮದ ನರಸಿಂಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಡೆಯಬೇಕಿದೆ. ಗ್ರಾಮದ ಹೊರಹೊಲಯದ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ನರಸಿಂಹೇಶ್ವರ ಕೃಪೆಯಿಂದ ಗ್ರಾಮಕ್ಕೆ ಯಾವುದೇ ಆಪತ್ತು ಬರುವುದಿಲ್ಲ. ಇಂತಹ ದೇವರ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಯಾರೊಬ್ಬ ಅಧಿಕಾರಿಯಾಗಲಿ ಜನಪ್ರತಿನಿಧಿಯಾಗಲಿ ಗಮನ ಹರಿಸಿಲ್ಲ. ಇತಿಹಾಸ ಪ್ರಸಿದ್ಧ ನರಸಿಂಹ ಸ್ವಾಮಿ ದೇವಸ್ಥಾನದ ದುರಸ್ತಿ ಮಾಡುವ ಮೂಲಕ ಅದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕು ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.