
ಲಕ್ಕುಂಡಿ: ‘ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಸಲಹೆ ನೀಡಿದರು.
ಇಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳು, ಮಹಿಳೆಯರು ಹಾಗೂ ಅಂಗವಿಕಲರ ಗ್ರಾಮ ಸಭೆಯಲ್ಲಿ ಮಾತನಾಡಿದರು.
‘ಮಕ್ಕಳ ಬೇಡಿಕೆಗಳು ಬಹಳಷ್ಟು ಇರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರಿಗೆ ನಿರಾಶೆಯಾದರೆ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು. ಈ ಪ್ರೌಢಶಾಲೆಯ ಮೂಲಸೌಲಭ್ಯದ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ₹5 ಲಕ್ಷ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡಲು ಇಂತಹ ಗ್ರಾಮ ಸಭೆಗಳನ್ನು ನಡೆಸುವುದು ಅವಶ್ಯಕ. ಈ ದಿಸೆಯಲ್ಲಿ ಮಕ್ಕಳ ಸರ್ವಾಂಗಿಣ ಅಭಿವೃದ್ದಿ ದೃಷ್ಟಿಯಿಂದ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದರು.
ಬಿಇಒ ವಿ.ವಿ.ನಡುವಿನಮನಿ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಬೇಕಾಗುವ ಸೌಕರ್ಯಗಳನ್ನು ಜನಪ್ರತಿನಿಧಿಗಳ ಸಹಾಯ, ಸಹಕಾರದೊಂದಿಗೆ ಒದಗಿಸಲಾಗುವುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ‘ಎರಡೂವರೆ ವರ್ಷದ ಅವಧಿಯೊಳಗೆ ಸರ್ಕಾರದ ನಿಯಮಾವಳಿ ಪ್ರಕಾರ ಎಲ್ಲ ವಾರ್ಡ್ ಮತ್ತು ಗ್ರಾಮಸಭೆ ನಡೆಸಿದ್ದೇನೆ. ಗ್ರಾಮ ಪಂಚಾಯಿತಿ ಅನುದಾನದ ಇತಿಮಿತಿಯಲ್ಲಿ ಗ್ರಾಮದ ಅಭಿವೃದ್ದಿ ಜತೆಗೆ ಮಕ್ಕಳ ಶೈಕ್ಷಣಿಕ ಪರಿಸರ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.
ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಎಂ.ವಿ.ಚಳಗೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಬರಟ್ಟಿ, ಗ್ರಾಮೀಣ ಸಿಪಿಐ ಸಿದ್ಧರಾಮೇಶ ಗಡೇದ ವೇದಿಕೆಯಲ್ಲಿದ್ದರು.
ಪಿಡಿಒ ಅಮೀರನಾಯಕ ಸ್ವಾಗತಿಸಿದರು. ವೈ.ವೈ.ಬೆಟಗೇರಿ ನಿರೂಪಿಸಿದರು. ಕಾರ್ಯದರ್ಶಿ ಎಂ.ಎ.ಗಾಜಿ ವಂದಿಸಿದರು.
ಪ್ರವಾಸಿಗರು ಸಂಚರಿಸುವ ರಸ್ತೆಯಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕ್ರಮ ವಹಿಸಲಾಗುವುದು. ಶಾಲೆ ಸರ್ಕಾರಿ ಕಾರ್ಯಾಲಯದ ಹತ್ತಿರ ವಾಹನಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವವರಿಗೆ ₹100 ದಂಡ ವಿಧಿಸಲಾಗುವುದು
–ಅಮೀರನಾಯಕ ಪಿಡಿಒ
ಶೌಚಾಲಯ ನಿರ್ಮಿಸಿ ನೈರ್ಮಲ್ಯ ಕಾಪಾಡಿ
ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಎಂ.ಕೆ.ಬಿಎಸ್ ಕೆ.ಜಿಎಸ್ ಡಿ.ಪಿ.ಇ.ಪಿ ಪ್ರಾಥಮಿಕ ಶಾಲೆ ಎಲ್.ಪಿ.ಎಸ್ ಸರ್ಕಾರಿ ಉರ್ದು ಶಾಲೆ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಬಾಪೂಜಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶೌಚಾಲಯ ನಿರ್ಮಾಣ ಶಾಲೆಗೆ ಬರುವ ರಸ್ತೆಯಲ್ಲಿ ಮಲ ಮೂತ್ರ ವಿಸರ್ಜನೆ ತಡೆಯುವುದು ಮೈದಾನದಲ್ಲಿ ಮದ್ಯಪಾನ ತಡೆಗಟ್ಟುವುದು ವಾಹನಗಳ ಧ್ವನಿವರ್ಧಕ ತಡೆಯುವುದು ಕಾಂಪೌಂಡ್ ಎತ್ತರಿಸುವುದು ಅಂಗವಿಕಲರ ವಿದ್ಯಾರ್ಥಿಗಳಿಗೆ ಗಾಲಿಕುರ್ಚಿ ನೀಡುವುದು ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ವಿವಿಧ ಶೈಕ್ಷಣಿಕವಾಗಿ ಇರುವ ಕೊರೆತೆಗಳ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಲಾಯಿತು.