
ಲಕ್ಕುಂಡಿ: ‘ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಸಲಹೆ ಪಡೆದುಕೊಳ್ಳಬೇಕು. ಉತ್ಖನನದಿಂದ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ಖನನ ಕಾರ್ಯ ನಡೆಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಇಲ್ಲಿಯ ಕದಾಂಪುರ ಮತ್ತು ಚುರ್ಚಿಹಾಳ ರಸ್ತೆಯಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಈ ದಿಸೆಯಲ್ಲಿ ಗ್ರಾಮಸ್ಥರ ಸಹಕಾರಕ್ಕಾಗಿ ದಿನಾಂಕ ನಿಗದಿ ಮಾಡಿ ಸಚಿವರ ಸಮ್ಮುಖದಲ್ಲಿ ಗ್ರಾಮ ಸಭೆ ಕರೆದು ಲಕ್ಕುಂಡಿಯ ಗತ ವೈಭವವನ್ನು ಜಗತ್ತಿಗೆ ತೋರಿಸುವ ಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು.
ಎರಡು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಅದ್ದೂರಿಯಾಗಿ ಲಕ್ಕುಂಡಿ ಉತ್ಸವ ನಡೆಸಿತ್ತು. ಈ ವರ್ಷ ಕೂಡ ಲಕ್ಕುಂಡಿ ಉತ್ಸವವನ್ನು ಆಚರಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗುವುದು. ಲಕ್ಕುಂಡಿ ಅಭಿವೃದ್ಧಿ ಮತ್ತು ಉತ್ಸವ ಆಚರಣೆ ಕುರಿತು ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚೆ ಮಾಡಲು ಸಚಿವ ಎಚ್.ಕೆ. ಪಾಟೀಲ ಅವರು ನನ್ನೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗ್ರಾಮ ಪಂಚಾಯಿತಿ ನಿವೇಶನ ನೀಡಿದ್ದು, ಅಧಿಕೃತ ದಾಖಲೆಪತ್ರಗಳನ್ನು ಒದಗಿಸಿದ ನಂತರ ವೈಯಕ್ತಿವಾಗಿ ಆ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ‘ಸಚಿವ ಎಚ್.ಕೆ. ಪಾಟೀಲ ಮತ್ತು ಶಾಸಕ ಸಿ.ಸಿ. ಪಾಟೀಲ ಅವರು ಕಾಳಜಿ ವಹಿಸಿ ಎರಡು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಸ್ವಾಗತಾರ್ಹ. ಈ ದಿಸೆಯಲ್ಲಿ ಗ್ರಾಮದ ಮೂರು ಭಾಗದಲ್ಲಿ ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಅನುದಾನ ಒದಗಿಸಬೇಕು’ ಎಂದು ಮನವಿ ಮಾಡಿದರು.
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ಧಲಿಂಗೆಶ್ವರ ಪಾಟೀಲ ಮಾತನಾಡಿ, ಜ್ಯಾತ್ಯತೀತ ಮತ್ತು ಪಕ್ಷಾತೀತವಾಗಿ ಲಕ್ಕುಂಡಿ ಅಭಿವೃದ್ದಿ ಮಾಡಲು ಶ್ರಮಿಸಲಾಗುವುದು. ಶಾಸಕರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಯೋಧ ದತ್ತಾತ್ರೇಯ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಕಲಕೇರಿ, ವಸಂತ ಮೇಟಿ, ಪಂಚಾಯಿತಿ ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಪೀರಸಾಬ ನದಾಫ, ವಿರುಪಾಕ್ಷಿ ಬೆಟಗೇರಿ, ಪ್ರೇಮಾ ಮಟ್ಟಿ, ಇಒ ಮಲ್ಲಯ್ಯ ಕೊರವನವರ, ಪಿಡಿಒ ಅಮೀರನಾಯಕ ಇದ್ದರು.
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೇ ಉತ್ಖನನ ಕಾರ್ಯ ನಡೆಸುತ್ತಿದ್ದು ಗ್ರಾಮ ಸಭೆ ಕರೆದು ಅಭಿಪ್ರಾಯ ಪಡೆಯಬೇಕುಮಹೇಶ, ಮುಸ್ಕಿನಬಾವಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ
ಲಕ್ಕುಂಡಿಯು ವಿಶ್ವ ಪರಂಪರೆ ಪಟ್ಟಿಗೆ ಸೇರಬೇಕೆನ್ನುವ ನಿಟ್ಟಿನಲ್ಲಿ 2018ರಲ್ಲಿ ಲಕ್ಕುಂಡಿ ಅಭಿವೃದ್ದಿ ಪ್ರಾಧಿಕಾರ ರಚನೆಯಾಯಿತು. 2020ರಲ್ಲಿ ಶಾಸಕ ಸಿ.ಸಿ.ಪಾಟೀಲ ಅವರ ನೇತೃತ್ವದಲ್ಲಿ ಅಧಿಸೂಚನೆಯಾಗಿದ್ದು ಅವರ ಸೂಚನೆಯಂತೆ ಗ್ರಾಮ ಸಭೆ ಕರೆಯಲಾಗುವುದು.ಶರಣು ಗೋಗೇರಿ, ಲಕ್ಕುಂಡಿ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ
ಉತ್ಖನನ ಸ್ಥಳ ವೀಕ್ಷಣೆ ಮಾಡಿದ ಶಾಸಕ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಕಾರ್ಯವನ್ನು ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ ಶನಿವಾರ ವೀಕ್ಷಿಸಿದರು. ‘9 ದಿನಗಳಿಂದ ನಡೆಯುತ್ತಿರುವ ಉತ್ಖನನದಲ್ಲಿ ಹಲವಾರು ಪ್ರಾಚ್ಯ ಅವಶೇಷಗಳು ದೊರೆತಿವೆ. ಈ ಸಂಬಂಧ ಮುಂದಿನ ರೂಪುರೇಷೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚಿಸುತ್ತೇನೆ. ಈ ಭಾಗದ ಸಂಸದರಾದ ಪಿ.ಸಿ.ಗದ್ದಿಗೌಡರ ಜ.26ರಂದು ಉತ್ಖನನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ’ ಎಂದರು. ‘ಮಾಧ್ಯಮಗಳು ಲಕ್ಕುಂಡಿ ಉತ್ಖನನದ ಕುರಿತು ಅತಿರೇಕದ ಸುದ್ದಿಗಳನ್ನು ಬಿತ್ತರಿಸುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗುತ್ತಾರೆ. ಆದ್ದರಿಂದ ವಾಸ್ತವದ ಸುದ್ದಿ ಪ್ರಸಾರ ಮಾಡಬೇಕು. ಲಕ್ಕುಂಡಿ ಗ್ರಾಮ ಸ್ಥಳಾಂತರ ಬಗ್ಗೆ ಯಾವುದೇ ಆಲೋಚನೆ ಇಲ್ಲ’ ಎಂದರು.
ಗುಣಮಟ್ಟದ ಕಾಮಗಾರಿ ನಡೆಸಿ:
ಶಾಸಕ ‘ರೈತರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದ ಕದಾಂಪುರ ಮತ್ತು ಚುರ್ಚಿಹಾಳ ರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಈ ದಿಸೆಯಲ್ಲಿ ಅವಶ್ಯಕ ಅನುದಾನ ಬಿಡುಗಡೆ ಮಾಡಿದ್ದು ಗುತ್ತಿಗೆದಾರರು ಸುಸಜ್ಜಿತವಾದ ಕಾಮಗಾರಿ ಮಾಡಬೇಕು’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು. ಕದಾಂಪುರ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ₹1.50 ಕೋಟಿ ಮತ್ತು ಚುರ್ಚಿಹಾಳ ರಸ್ತೆಯಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣಕ್ಕಾಗಿ ₹2.50 ಕೋಟಿ ವೆಚ್ಚದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.