ADVERTISEMENT

ರಿತ್ತಿ ಕುಟುಂಬಕ್ಕೆ ಸೂಕ್ತ ಪರಿಹಾರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:09 IST
Last Updated 19 ಜನವರಿ 2026, 7:09 IST
ಎಚ್.ಕೆ. ಪಾಟೀಲ
ಎಚ್.ಕೆ. ಪಾಟೀಲ   

ಗದಗ: ‘ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿರುವ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ಜಾಗ ಇಲ್ಲವೇ, ಮನೆ ಕೊಡುವುದು ಸೇರಿ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸ ಕೊಡುವುದರ ಕುರಿತು ಜ.26ರಂದು ಸ್ಪಷ್ಟ ನಿರ್ಧಾರ ತಿಳಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕಳೆದ ಶನಿವಾರ ಮನೆ ಅಗೆಯುವ ಸಂದರ್ಭದಲ್ಲಿ 466 ಗ್ರಾಂ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ ರಿತ್ತಿಗೆ ಕಾನೂನು ಪ್ರಕಾರ ಸೂಕ್ತವಾದ ಪರಿಹಾರ ನೀಡಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ’ ಎಂದರು.

ADVERTISEMENT

‘ನಿಧಿಯ ಕಾಲಘಟ್ಟವನ್ನು ನಿರ್ಧರಿಸುವ ಸಲುವಾಗಿ ತಾಂತ್ರಿಕ ಸಮಿತಿ ರಚನೆ ಮಾಡಿ ಆದಷ್ಟು ಬೇಗ ವರದಿ ಕೊಡಲು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಬಯಲು ವಸ್ತು ಸಂಗ್ರಹಾಲಯಕ್ಕೆ ₹1.65 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ 3 ಎಕರೆ ಜಮೀನು ಪಡೆದುಕೊಂಡು ಸರ್ಕಾರಕ್ಕೆ ನೋಂದಣಿ ಮಾಡಿಕೊಂಡು, ಅನುದಾನ ಬಿಡುಗಡೆ ಮಾಡುವ ಕುರಿತು ಚರ್ಚಿಸಲಾಯಿತು’ ಎಂದರು.

‘ಪ್ರಾಧಿಕಾರ ಸೂಚಿಸಿರುವ ಹಾಗೂ ಮುಚ್ಚಿರುವ ಇತಿಹಾಸದ ಕುರುಹುಗಳಾಗಿರುವ ಎರಡು ಮೂರು ದೇವಸ್ಥಾನಗಳನ್ನು ಸಾರ್ವಜನಿಕರ ಮನ ಒಲಿಸಿ ಮಾರ್ಚ್ ಅಂತ್ಯದೊಳಗೆ ಪಡೆದುಕೊಳ್ಳಲು ಚರ್ಚೆ ನಡೆಸಲಾಗಿದೆ’ ಎಂದರು.

500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಆದಷ್ಟು ಬೇಗ ಬಯಲು ವಸ್ತು ಪ್ರದರ್ಶನ ಸ್ಥಳಕ್ಕೆ ತಲುಪಿಸಿ, ಅಧ್ಯಯನ ಪ್ರಾರಂಭವಾಗಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.

ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಇತಿಹಾಸಜ್ಞ ಅ.ದ. ಕಟ್ಟಿಮನಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್., ಡಾ.ಶರಣು‌ ಗೊಗೇರಿ, ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ, ಅಧಿಕಾರಿಗಳಾದ ಗಂಗಪ್ಪ ಎಂ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಶೈಜೇಶ್ವರ, ಮಲ್ಲಯ್ಯ ಕೆ, ಅಮೀರ್ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.