
ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪ್ರತಿವರ್ಷ ಉತ್ಸವ ನಡೆಸಲು ಸರ್ಕಾರ ಕ್ರಮವಹಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ ಆಗ್ರಹಿಸಿದರು.
ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
‘ಲಕ್ಕುಂಡಿ ಉತ್ಸವ ನಡೆಸುವುದರಿಂದ ಸಾಕಷ್ಟು ಲಾಭವಿದೆ. ಇಲ್ಲಿನ ಶ್ರೀಮಂತ ಇತಿಹಾಸ, ಪರಂಪರೆ ಕುರಿತಾಗಿ ಜನರಿಗೆ ತಿಳಿಯುತ್ತದೆ. ಉತ್ಸವ ಆಯೋಜನೆಯಿಂದ ಪ್ರವಾಸೋದ್ಯಮ ಕ್ಷೇತ್ರವೂ ಬೆಳೆಯುತ್ತದೆ’ ಎಂದರು.
ರಿತ್ತಿ ಕುಟುಂಬಕ್ಕೆ ಏನು ಕೊಟ್ಟರೂ ಕಡಿಮೆಯೇ: ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ, ಕಸ್ತೂರವ್ವ ರಿತ್ತಿ ಹಾಗೂ ಗಿರಜಮ್ಮ ಅವರ ಪ್ರಾಮಾಣಿಕತೆಗೆ ಸರ್ಕಾರ ಏನು ಕೊಟ್ಟರೂ ಕಡಿಮೆಯೇ ಎಂದು ಹೇಳಿದರು.
ಅವರಿಗೆ ನಿವೇಶನ, ಮನೆ ಕಟ್ಟಿಕೊಳ್ಳಲು ಸರ್ಕಾರ ₹5 ಲಕ್ಷ ನೆರವು ನೀಡಿದೆ. ಅವರ ಅನುಕೂಲಕ್ಕೆ ಏನೇನು ಅವಶ್ಯಕತೆ ಇದೆಯೋ ಸರ್ಕಾರ ಎಲ್ಲವನ್ನೂ ಕೊಡಬೇಕು. ಮನೆ ಕಟ್ಟಿಕೊಳ್ಳಲು ಇನ್ನಷ್ಟು ಆರ್ಥಿಕ ನೆರವು ನೀಡಬೇಕು ಎಂದರು.
ಗ್ಯಾರಂಟಿ ವಿರುದ್ಧ ಕಿಡಿ: ಗ್ಯಾರಂಟಿಗಳನ್ನು ಬಂದ್ ಮಾಡದಿದ್ದರೆ ದೇಶಕ್ಕೆ ಆಪತ್ತು ಎದುರಾಗಲಿದೆ. ಯಾವ ರಾಜಕೀಯ ಪಕ್ಷಗಳೂ ಗ್ಯಾರಂಟಿ ಘೋಷಣೆ ಮಾಡದಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಮುಂದಿನ ತಲೆಮಾರು ಬಾಳಿ ಬದುಕುವುದನ್ನು ನೋಡಬೇಕೇ ಹೊರತು ರಾಜಕೀಯ ಪಕ್ಷಗಳು ವೈಯಕ್ತಿಕ ಲಾಭ, ಮತಕ್ಕಾಗಿ ಸ್ವಾರ್ಥದಿಂದ ಯೋಚಿಸಬಾರದು. ‘ಗೃಹಲಕ್ಷ್ಮಿ’ ಯೋಜನೆ ಹಣ ಕುಡುಕ ಗಂಡಂದಿರ ಪಾಲಾಗುತ್ತಿದೆ. ಸರಿಯಾಗಿ ದುಡಿದು ಉಣ್ಣುವುದನ್ನು ಕಲಿತರೆ ಸಾಲ ಇಲ್ಲದಂತೆ ಸರ್ಕಾರ ನಡೆಸಬಹುದು. ಹಾಗಾಗಿ, ಎಲ್ಲ ಪಕ್ಷಗಳ ರಾಜಕೀಯ ನಾಯಕರ ಜತೆಗೆ ಚರ್ಚಿಸಿ, ಯಾರೂ ಗ್ಯಾರಂಟಿಗಳನ್ನು ಘೋಷಣೆ ಮಾಡದ ರೀತಿಯಲ್ಲಿ ಕಾನೂನು ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಬೆಳೆಗೆ ಬೆಂಬಲ ಬೆಲೆ ಸಿಗಲಿ: ಕೃಷಿ ಪ್ರಧಾನ ದೇಶ ನಮ್ಮದು. ಆದರೆ, ಕೃಷಿಕರು ಅಭದ್ರತೆಯಲ್ಲಿದ್ದಾರೆ. ಅವರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಲು ಎಲ್ಲ ಸರ್ಕಾರಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಲಕ್ಕುಂಡಿ ಶರಣರ ಬೀಡು. ಅತ್ತಿಮಬ್ಬೆಯ ಕರ್ಮಭೂಮಿ. ಇಲ್ಲಿ ಪ್ರತಿವರ್ಷವೂ ತಪ್ಪದಂತೆ ಲಕ್ಕುಂಡಿ ಉತ್ಸವ ಆಚರಿಸಲು ಸರ್ಕಾರ ಕ್ರಮವಹಿಸಬೇಕು.– ಎಸ್.ಎಸ್.ಪಾಟೀಲ, ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.