ಲಕ್ಕುಂಡಿ: ‘ರೈತರು ಫಸಲು ರಾಶಿ ಮಾಡಲು ರಾಷ್ಟ್ರೀಯ ಹೆದ್ದಾರಿ ಅವಲಂಬಿಸಿದ್ದು, ಇದು ಅಪಾಯಕಾರಿಯಾಗಿದೆ. ಈ ಸಮಸ್ಯೆ ನೀಗಿಸಲು ಜಮೀನು ಖರೀದಿಸಿ ಕಣ ಮಾಡಬೇಕು’ ಎಂದು ರೈತರು ಒತ್ತಾಯಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ನಮ್ಮ ಗ್ರಾಮ ನಮ್ಮ ಯೋಜನೆ ತಯಾರಿಸುವ ಗ್ರಾಮ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಪರಿಹಾರ ಒದಗಿಸಲು ಯೋಜನೆ ರೂಪಿಸಿ, ಅನುಮೋದನೆ ಪಡೆಯಲಾಯಿತು.
ಗ್ರಾಮದಲ್ಲಿ ಕಳ್ಳತನವನ್ನು ತಪ್ಪಿಸಲು ಮತ್ತು ಶಾಲಾ ಮೈದಾನದಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ ತಪ್ಪಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಗ್ರಾಮ ಪಂಚಾಯಿತಿ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಪೂಜಾರ ಮಾತನಾಡಿ, ಈಗಾಗಲೇ ಹತ್ತು ಹಲವಾರು ಸಮಸ್ಯಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದು ಸ್ವಾಗತಾರ್ಹ ಎಂದರು.
ಇಲ್ಲಿನ ಪಶು ಚಿಕಿತ್ಸಾಲಯ, ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು, ಗ್ರಾಮದಲ್ಲಿ ಈಚೆಗೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯುತ್ತಿದ್ದು ಉಪಠಾಣೆ ಸ್ಥಾಪನೆ ಮಾಡಿದರೆ ಶೀಘ್ರ ಕ್ರಮ ಜರುಗಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ಗ್ರಾಮ ಹಂತದಲ್ಲೇ ಸಮಗ್ರ ಯೋಜನೆ ರೂಪಿಸಿ, ಗ್ರಾಮಾಭಿವೃದ್ಧಿ ಮಾಡುವ ವಿನೂತನ ಪ್ರಯತ್ನ ಇದಾಗಿದ್ದು, ಜನರ ಬೇಡಿಕೆಯೇ ಸರ್ಕಾರದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಲಕ್ಕುಂಡಿ ಗ್ರಾಮದಲ್ಲಿ ವಿಶೇಷ ಗ್ರಾಮಸಭೆಯ ಮೂಲಕ 5 ವರ್ಷಗಳಲ್ಲಿ ಹೆಚ್ಚು ಅಭಿವೃದ್ಧಿ ಮಾಡುವ ಕನಸು ಸರ್ಕಾರದ್ದಾಗಿದ್ದು, ಗ್ರಾಮಸ್ಥರು ಸಹಕರಿಸಬೇಕು ಎಂದರು.
ಪಿಡಿಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, 11 ವಾರ್ಡ್‌ಗಳಲ್ಲಿ ಅಭಿವೃದ್ಧಿ ಮಾಡಬೇಕಾದ ವಿಷಯಗಳ ಕುರಿತು ಸಭೆಗೆ ತಿಳಿಸಿ, ಚರ್ಚಿಸಿ ಅನುಮೋದನೆ ಪಡೆದರು.
ಗ್ರಂಥಾಲಯ, ಸ್ಮಶಾನ, ಆರೋಗ್ಯ, ಕೃಷಿ, ತೋಟಗಾರಿಕೆ, ಶಿಕ್ಷಣ, ವಿದ್ಯುತ್, ಸಾರಿಗೆ, ಸಂಜೀವಿನಿ ಒಕ್ಕೂಟ, ಸಮುದಾಯ ಭವನ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.
ಬಿಇಒ ವಿ.ವಿ.ನಡುವಿನಮನಿ, ಕೃಷಿ ಇಲಾಖೆಯ ಬಸವರಾಜೇಶ್ವರಿ, ಯೋಜನಾಧಿಕಾರಿ ಗೋವಿಂದರೆಡ್ಡಿ, ತೋಟಗಾರಿಕೆ ಇಲಾಖೆಯ ಶಂಭು ನೆಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಇಲಾಖೆಯ ರಾಜೇಶ್ವರಿ ಉಪ್ಪಿನ, ಹೆಸ್ಕಾಂ ಅಧಿಕಾರಿ ದೊಡ್ಡಮನಿ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಕೆ.ಬಿ.ಜಾನೋಪಂತರ ಸ್ವಾಗತಿಸಿದರು. ಎಂ.ಎ.ಗಾಜಿ ವಂದಿಸಿದರು.
ಈ ಭಾಗದಲ್ಲಿ ಈಗಾಗಲೇ ಬೈಕ್ ಸವಾರರು ನಿಯಮ ಉಲ್ಲಂಘಿಸಿದ 2000 ಪ್ರಕರಣಗಳು ಬಾಕಿ ಇದ್ದು ಗಾಂಜಾ ಪ್ರಕರಣ ಭೇದಿಸಲಾಗಿದೆ. ಟ್ರ್ಯಾಕ್ಟರ್ ಆಟೊದಲ್ಲಿ ಸೌಂಡ್ ಸಿಸ್ಟಮ್ ಅಳವಡಿಕೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ಜರುಗಿಸಲಾಗುವುದುಸಿದ್ಧರಾಮೇಶ ಗಡೇದ ಗದಗ ಗ್ರಾಮೀಣ ಸಿಪಿಐ
ಶಾಲೆಗಳ ಶೌಚಾಲಯ ಸ್ವಚ್ಛತೆಗೆ ಸರ್ಕಾರ ಸ್ವಚ್ಛತಾಗಾರರನ್ನು ನೇಮಕ ಮಾಡಿ ಅನುದಾನ ಒದಗಿಸಬೇಕು ಗವಿಶಿದ್ದಪ್ಪ ಯಲಿಶಿರುಂಜ ಎಸ್ಡಿಎಂಸಿಅಧ್ಯಕ್ಷ ನಾಗಮ್ಮ ಹಾಲಿನವರ ಮಾಜಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.