ADVERTISEMENT

ಲಕ್ಷ್ಮೇಶ್ವರ | ಹದಗೆಟ್ಟ ರಸ್ತೆಗಳು; ಸಂಚಾರಕ್ಕೆ ಪರದಾಟ

ಒಳಚರಂಡಿ ಮಂಡಳಿ ಕಾಮಗಾರಿ ನಂತರ ದುಸ್ಥಿತಿಯಲ್ಲಿ ರಸ್ತೆಗಳು; ಸಾರ್ವಜನಿಕರ ಆಕ್ರೋಶ

ನಾಗರಾಜ ಎಸ್‌.ಹಣಗಿ
Published 11 ಆಗಸ್ಟ್ 2025, 2:44 IST
Last Updated 11 ಆಗಸ್ಟ್ 2025, 2:44 IST
ಲಕ್ಷ್ಮೇಶ್ವರದಲ್ಲಿ ಮೆಕ್ಕಿ ಅವರ ಗೊಬ್ಬರದ ಅಂಗಡಿಯಿಂದ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಸ್ಥಿತಿ
ಲಕ್ಷ್ಮೇಶ್ವರದಲ್ಲಿ ಮೆಕ್ಕಿ ಅವರ ಗೊಬ್ಬರದ ಅಂಗಡಿಯಿಂದ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಸ್ಥಿತಿ   

ಲಕ್ಷ್ಮೇಶ್ವರ: ಆರೋಗ್ಯ ಸೇವೆ, ಶಿಕ್ಷಣ, ವ್ಯವಹಾರ ಕೆಲಸ ಸೇರಿದಂತೆ ಮತ್ತಿತರ ಕಾರ್ಯಗಳಿಗಾಗಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಪ್ರತಿದಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಜನರು ಬಂದು ಹೋಗುತ್ತಾರೆ. ಆದರೆ, 23 ವಾರ್ಡ್‍ಗಳು ಇರುವ ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ ಸುಸಜ್ಜಿತವಾದ ರಸ್ತೆಗಳೇ ಇಲ್ಲ. ಇರುವ ರಸ್ತೆಗಳೆಲ್ಲವೂ ಗುಂಡಿಗಳಿಂದ ತುಂಬಿದ್ದು ಸಾರ್ವಜನಿಕರ ಪ್ರಾಣಹರಣಕ್ಕಾಗಿ ಕಾಯುತ್ತಿವೆ.

ಹೌದು. ಇದು ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮೇಶ್ವರದ ರಸ್ತೆಗಳ ದುಸ್ಥಿತಿ.

ಪ್ರತಿವರ್ಷ ಪಟ್ಟಣದ ನಿವಾಸಿಗಳು ಪುರಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುತ್ತಾರೆ. ಆದರೆ ತೆರಿಗೆ ಹಣದಲ್ಲಿ ಪಟ್ಟಣಕ್ಕೆ ಅಗತ್ಯ ಇರುವ ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ್ದು ಪುರಸಭೆ ಅಧಿಕಾರಿಗಳ ಜವಾಬ್ದಾರಿ. ಆದರೆ, ಈ ವಿಷಯದಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಟ್ಟಣದಲ್ಲಿನ ಎಲ್ಲ ಪ್ರಮುಖ ರಸ್ತೆಗಳು ಹದಗೆಟ್ಟು ಏಳೆಂಟು ವರ್ಷಗಳೇ ಕಳೆದಿದ್ದರೂ ಇನ್ನೂ ದುರಸ್ತಿ ಮಾಡಿಸುವ ಅಥವಾ ಹೊಸದಾಗಿ ರಸ್ತೆ ನಿರ್ಮಿಸುವ ಗೋಜಿಗೆ ಪುರಸಭೆ ಅಧಿಕಾರಿಗಳು ಹೋಗಿಲ್ಲ. ಇದಕ್ಕಾಗಿ ಜನರು ಪುರಸಭೆಗೆ ಹಿಡಿಶಾಪ ಹಾಕುತ್ತಲೇ ಬಂದಿದ್ದಾರೆ.

ಪಟ್ಟಣದಲ್ಲಿ 118 ಕಿ.ಮೀ. ರಸ್ತೆ ಇದ್ದು ಇದರಲ್ಲಿ 22 ಕಿ.ಮೀ. ಡಾಂಬರೀಕರಣ, 31 ಕಿ.ಮೀ. ಸಿಸಿ ರಸ್ತೆ, 28 ಕಿ.ಮೀ. ರಸ್ತೆ ಮೆಟ್ಲಿಂಗ್ ಆಗಿದ್ದು 36 ಕಿ.ಮೀ. ಕಚ್ಚಾ ರಸ್ತೆ ಇದೆ.

ಮಹಾಕವಿ ಪಂಪ ವರ್ತುಲದಿಂದ ವಿದ್ಯಾರಣ್ಯ ವರ್ತುಲದ ಮೂಲಕ ಬಜಾರಕ್ಕೆ ಬರುವ ರಸ್ತೆ, ಮಹಾಕವಿ ಪಂಪ ವರ್ತುಲದಿಂದ ಕೋರ್ಟ್ ಕಡೆ ಹೋಗುವ ರಸ್ತೆ, ಮಾನ್ವಿ ಪೆಟ್ರೋಲ್ ಬಂಕ್‍ನಿಂದ ಅನಂತನಾಥ ಬಸದಿ ಎದುರಿನಿಂದ ವಿದ್ಯಾರಣ್ಯ ವರ್ತುಲದ ಕಡೆ ಹೋಗುವ ರಸ್ತೆ, ಸೋಮೇಶ್ವರ ಪಾದಟ್ಟಿಯಿಂದ ಹಳೆ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಎಪಿಎಂಸಿ ಹತ್ತಿರದ ಮಾನ್ವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಶಿವರುದ್ರಮ್ಮ ದೇವಸ್ಥಾನದ ಎದುರಿನಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಇವು ಪಟ್ಟಣದ ಪ್ರಮುಖ ರಸ್ತೆಗಳಾಗಿವೆ.

ಆದರೆ, ಈ ರಸ್ತೆಗಳಲ್ಲೆಲ್ಲಾ ಸುಲಭವಾಗಿ ಸಂಚರಿಸಲು ಆಗದಷ್ಟು ಮಟ್ಟಿಗೆ ತಗ್ಗು ಬಿದ್ದು ಹಾಳಾಗಿವೆ. ಮಳೆಗಾಲದಲ್ಲಿ ರಾಡಿ ನೀರಿನ ಕಾಟವಾದರೆ ಬೇಸಿಗೆಯಲ್ಲಿ ದೂಳಿನ ಸಮಸ್ಯೆ ನಿವಾಸಿಗಳ ಜೀವ ಹಿಂಡುತ್ತಿದೆ.

ಏಳೆಂಟು ವರ್ಷಗಳ ಮೊದಲು ಪಟ್ಟಣದಲ್ಲಿ ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದವು. ಆದರೆ 2016ರಲ್ಲಿ ಒಳ ಚರಂಡಿ ಮಂಡಳಿ ಕಾಮಗಾರಿ ಶುರು ಮಾಡಿದ ನಂತರ ರಸ್ತೆಗಳು ಹಾಳಾದವು. ಒಳಚರಂಡಿ ಕಾಮಗಾರಿ ಮುಗಿದ ಮೇಲೆ ಮಂಡಳಿಯು ಕಿತ್ತ ರಸ್ತೆಗಳನ್ನು ಮತ್ತೆ ನಿರ್ಮಿಸಿಕೊಡಬೇಕಾಗಿತ್ತು. ಆದರೆ, 2019ರಲ್ಲಿ ಆಗಿನ ಪುರಸಭೆ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ಅವರು ರಸ್ತೆ ದುರಸ್ತಿ ಮಾಡಿಸದೆ ಒಳ ಚರಂಡಿ ಮಂಡಳಿಗೆ ಕಾಮಗಾರಿ ಪೂರ್ಣಗೊಂಡ ಬಗ್ಗೆ ಎನ್‍ಒಸಿ ನೀಡಿದರು. ಅಂದು ಅಧಿಕಾರಿಗಳು ಮಾಡಿದ ತಪ್ಪಿಗೆ ಇಂದು ಜನರು ಉತ್ತಮ ರಸ್ತೆ ಇಲ್ಲದೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಲಕ್ಷ್ಮೇಶ್ವರದ ರಸ್ತೆಗಳು ಈ ಸ್ಥಿತಿಗೆ ಬರಲು ಒಳ ಚರಂಡಿ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳೇ ಹೊಣೆಗಾರರು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಮಹಾಕವಿ ಪಂಪ ವರ್ತುಲದಿಂದ ವಿದ್ಯಾರಣ್ಯ ವರ್ತುಲದ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣ ಆಗಿದ್ದು ಜನತೆಗೆ ಇನ್ನಿಲ್ಲದ ತೊಂದರೆ ಕೊಡುತ್ತಿವೆ. ಈ ರಸ್ತೆ ಪಟ್ಟಣದ ಹೃದಯ ಭಾಗದಲ್ಲಿದ್ದು ಇಲ್ಲಿ ಯಾವಾಗಲೂ ಜನ ಸಂಚಾರ ಹೆಚ್ಚಿರುತ್ತದೆ. ಆದರೆ ಹಾಳಾದ ರಸ್ತೆ ಜನರಲ್ಲಿ ಕಿರಿಕಿರಿ ಉಂಟು ಮಾಡುತ್ತಿದೆ.

ಇನ್ನು ಲಕ್ಷ್ಮೇಶ್ವರದಲ್ಲಿ ಹತ್ತಾರು ನೂತನ ಬಡಾವಣೆಗಳು ನಿರ್ಮಾಣಗೊಂಡಿವೆ. ಆದರೆ ಕೈ ಬೆರಳೆಣಿಕೆಯಷ್ಟು ಬಡಾವಣೆಗಳಲ್ಲಿ ರಸ್ತೆಗಳು ನಿರ್ಮಾಣಗೊಂಡಿದ್ದು ಬಿಟ್ಟರೆ ಉಳಿದ ಕಡೆ ಕಚ್ಚಾ ರಸ್ತೆಗಳದ್ದೇ ದರ್ಬಾರ್. ಈಗಾಗಲೇ ಅಸ್ತಿತ್ವದಲ್ಲಿರುವ ವಿನಾಯಕ ನಗರದ ಮೇಲ್ಭಾಗ, ಸೋಮೇಶ್ವರ ನಗರ, ಜನ್ನತ್ ನಗರ, ಲಕ್ಷ್ಮೀ ನಗರ, ಅಬ್ದುಲ್ ಕಲಾಂ ನಗರ, ಈಶ್ವರ ನಗರ, ಮಹಾಂತೇಶ ನಗರ, ಕರೇಗೌರಿ ಆಶ್ರಯ ಕಾಲೊನಿ, ರಂಭಾಪುರಿ ಆಶ್ರಯ ಕಾಲೊನಿಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ. ಮಳೆಗಾಲದಲ್ಲಂತೂ ನೂತನ ಬಡಾವಣೆಗಳಿಗೆ ಹೋಗಲು ಸಾಧ್ಯವೇ ಇಲ್ಲದಂತಾಗಿದ್ದು, ಅಷ್ಟರಮಟ್ಟಿಗೆ ರಸ್ತೆಗಳು ಹಾಳಾಗಿವೆ. ಇಡೀ ಪಟ್ಟಣದ ತುಂಬ ಇಷ್ಟೆಲ್ಲ ರಸ್ತೆಗಳ ಕೊರತೆ ಇದ್ದರೂ ಕೂಡ ಪುರಸಭೆ ರಸ್ತೆ ನಿರ್ಮಿಸಲು ಮುಂದಾಗಿಲ್ಲ, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಕ್ಷ್ಮೇಶ್ವರ ಪಟ್ಟಣದ ವಿದ್ಯಾರಣ್ಯ ವರ್ತುಲದಿಂದ ಬಜಾರಕ್ಕೆ ತೆರಳುವ ರಸ್ತೆಯಲ್ಲಿರುವ ಗುಂಡಿಗಳು
ಲಕ್ಷ್ಮೇಶ್ವರದ ಬದಿ ಅವರ ಔಷಧ ಅಂಗಡಿಯಿಂದ ಎಸ್‍ಟಿಪಿಎಂಬಿ ಶಾಲೆಗೆ ಹೋಗುವ ರಸ್ತೆ ಹಾಳಾಗಿರುವುದು
ಪಟ್ಟಣದಲ್ಲಿನ ಮುಖ್ಯರಸ್ತೆಗಳು ಬಹುತೇಕ ಹಾಳಾಗಿದ್ದು ಅನುದಾನ ಬಂದ ಹಾಗೆ ಹದಗೆಟ್ಟ ರಸ್ತೆಗಳನ್ನು ಆದ್ಯತೆ ಮೇರೆಗೆ ನಿರ್ಮಿಸುತ್ತೇವೆ. ಸಾರ್ವಜನಿಕರು ಸಹಕರಿಸಬೇಕು
ಮಹಾಂತೇಶ ಬೀಳಗಿ ಮುಖ್ಯಾಧಿಕಾರಿ ಲಕ್ಷ್ಮೇಶ್ವರ
ಒಳ ಚರಂಡಿ ಮಂಡಳಿಯ ಕೆಲಸ ಮುಗಿಯದಿದ್ದರೂ 2019ರಲ್ಲಿ ಎನ್‍ಒಸಿ ಕೊಟ್ಟ ಆಗಿನ ಪುರಸಭೆ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಅವರಿಂದ ಹಣ ವಸೂಲಿ ಮಾಡಿ ರಸ್ತೆ ನಿರ್ಮಿಸಬೇಕು
ಪ್ರವೀಣ ಬಾಳಿಕಾಯಿ ಪುರಸಭೆ ಸದಸ್ಯ

ಯಾರು ಏನಂತಾರೆ?

ಮುತ್ತಿಗೆ ಹಾಕುವ ದಿನ ದೂರ ಇಲ್ಲ ಮಹಾಕವಿ ಪಂಪ ಸರ್ಕಲ್‍ನಿಂದ ವಿದ್ಯಾರಣ್ಯ ಸರ್ಕಲ್‍ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಅಪಾಯದ ಗಂಟೆ ಬಾರಿಸುತ್ತಿದೆ. ರಸ್ತೆಯನ್ನು ಬೇಗ ದುರಸ್ತಿಗೊಳಿಸದಿದ್ದರೆ ಜನರೆಲ್ಲಾ ಸೇರಿ ಪುರಸಭೆಗೆ ಮುತ್ತಿಗೆ ಹಾಕುವ ದಿನಗಳು ದೂರ ಇಲ್ಲ.

–ನಾಗರಾಜ ಚಿಂಚಲಿ ಪಟ್ಟಣದ ನಿವಾಸಿ

ರಸ್ತೆಯಲ್ಲಿ ದೊಡ್ಡ ತೆಗ್ಗು ವಿದ್ಯಾರಣ್ಯ ವರ್ತುಲದಿಂದ ಬಜಾರಕ್ಕೆ ಬರುವ ರಸ್ತೆಯಲ್ಲಿ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿವೆ. ಬೇಸಿಗೆಯಲ್ಲಿ ರಸ್ತೆಯಿಂದ ಸಾಕಷ್ಟು ದೂಳು ಹೊರಹೊಮ್ಮಿ ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

–ಶಂಕರ ಸಿಳ್ಳಿನ ಪಟ್ಟಣದ ನಿವಾಸಿ

ದುರಸ್ತಿಗೆ ಕ್ರಮವಹಿಸಿ ಲಕ್ಷ್ಮೇಶ್ವರದಲ್ಲಿನ ಎಲ್ಲ ರಸ್ತೆಗಳು ಹಾಳಾಗಿ ವರ್ಷಗಳೇ ಕಳೆದರೂ ಸಹ ಪುರಸಭೆ ಅವುಗಳ ದುರಸ್ತಿ ಮಾಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದಷ್ಟು ಬೇಗನೇ ರಸ್ತೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಬೇಕು.

–ಮಹಾಬಳೇಶ ಮೆಡ್ಲೇರಿ ಪಟ್ಟಣದ ನಿವಾಸಿ

ರಸ್ತೆಯಲ್ಲಿ ಬಿದ್ದು ಗಾಯ ಮಾನ್ವಿ ಪೆಟ್ರೋಲ್ ಬಂಕ್‍ನಿಂದ ಅಕ್ಕಮಹಾದೇವಿ ದೇವಸ್ಥಾನಕ್ಕೆ ಬರುವ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆ ಗುಂಡಿ ಗೊತ್ತಿಲ್ಲದವರು ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ. ಬೇಗ ರಸ್ತೆ ನಿರ್ಮಿಸಬೇಕು.

–ಬಸವರಾಜ ಬಾಳೇಶ್ವರಮಠ ಪಟ್ಟಣದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.