
ಲಕ್ಷ್ಮೇಶ್ವರ: ‘ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸರ್ಕಾರ ಕೂಡಲೇ ಆರಂಭಿಸಿ ರೈತರ ಸಹಾಯಕ್ಕೆ ಬರಬೇಕು’ ಎಂದು ಶಿರಹಟ್ಟಿ ಸಂಸ್ಥಾನಮಠದ ಫಕ್ಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.
ಖರೀದಿ ಕೇಂದ್ರಕ್ಕಾಗಿ ಕಳೆದ ಹನ್ನೊಂದು ದಿನಗಳಿಂದ ಲಕ್ಷ್ಮೇಶ್ವರದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ವೇದಿಕೆಗೆ ಮಂಗಳವಾರ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
‘ರೈತರ ಫಸಲು ಮಾರುಕಟ್ಟೆಗೆ ಬರುವ ಮುನ್ನವೇ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ಅಂದರೆ ಮಾತ್ರ ಅವರಿಗೆ ಅನುಕೂಲ ಆಗುತ್ತದೆ. ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದಿರುವ ಫಸಲನ್ನು ಮಾರಾಟ ಮಾಡಲೂ ರೈತರು ಕಷ್ಟಪಡಬೇಕಾದ ಪರಿಸ್ಥಿತಿ ಇರುವುದು ನಿಜಕ್ಕೂ ದುರದೃಷ್ಟಕರ. ರೈತ ದೇಶದ ಬೆನ್ನೆಲುಬು ಎನ್ನುತ್ತೀರಿ. ಆದರೆ ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡದೆ ಅವನ ಎಲುಬನ್ನೇ ಮುರಿಯುತ್ತೀರಿ ಇದೆಂಥ ನ್ಯಾಯ’ ಎಂದು ಸ್ವಾಮೀಜಿ ಪ್ರಶ್ನಿಸಿದರು.
ರೈತ ಸಿಟ್ಟಿಗೆದ್ದರೆ ತಡೆಯುವುದು ಅಸಾಧ್ಯ. ಕಾರಣ ಅವರ ಆಕ್ರೋಶದ ಕಟ್ಟೆ ಒಡೆಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆದರಹಳ್ಳಿಯ ಕುಮಾರ ಮಹಾರಾಜರು, ಕುಂದಗೋಳ ಕಲ್ಯಾಣಪುರದ ಮಠದ ಬಸವಣ್ಣಜ್ಜನವರು, ಹತ್ತಿಮತ್ತೂರು, ಜಮಖಂಡಿಯ ಶ್ರೀಗಳು ಮಾತನಾಡಿದರು. ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಟಾಕಪ್ಪ ಸಾತಪುತೆ, ಬಸಣ್ಣ ಹಂಜಿ, ಸೋಮಣ್ಣ ಡಾಣಗಲ್ಲ, ರವಿಕಾಂತ ಅಂಗಡಿ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ಪೂರ್ಣಾಜಿ ಖರಾಟೆ, ನೀಲಪ್ಪ ಶೆರಸೂರಿ, ಸುರೇಶ ಹಟ್ಟಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.