
ಲಕ್ಷ್ಮೇಶ್ವರ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಚುನಾವಣಾ ಪೂರ್ವಭಾವಿ ಸಭೆಯು ಭಾನುವಾರ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಜರುಗಿತು.
ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿಪುಣರು. ದೇವರ ಹೆಸರಲ್ಲಿ ರಾಜಕಾರಣ ಮಾಡುವಲ್ಲಿ ಪರಿಣತರು. ಮುಂಬರಲಿರುವ ಪದವೀಧರ ಚುನಾವಣೆಯಲ್ಲಿ ಮೋಹನ ಲಿಂಬಿಕಾಯಿ ಅವರ ಗೆಲುವು ನಿಶ್ಚಿತ’ ಎಂದು ಹೇಳಿದರು.
ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ‘ಮೋಹನ ಲಿಂಬಿಕಾಯಿ ಅವರಿಗೆ ಪದವೀಧರ ಕ್ಷೇತ್ರದ ಚುನಾವಣೆ ಅವರಿಗೆ ಹೊಸತಲ್ಲ. ಕ್ಷೇತ್ರದ ಸಂಪೂರ್ಣ ಪರಿಚಯ ಅವರಿಗೆ ಇದೆ. ಹೀಗಾಗಿ ಈ ಬಾರಿ ಖಂಡಿತ ಜಯ ಗಳಿಸುತ್ತಾರೆ’ ಎಂದು ತಿಳಿಸಿದರು.
ಮೋಹನ ಲಿಂಬಿಕಾಯಿ ಮಾತನಾಡಿ, ‘ಪಶ್ಚಿಮ ಪದವೀಧರ ಕ್ಷೇತ್ರ ಬಹಳ ದೊಡ್ಡದು. ಇನ್ನೂ ಹೆಚ್ಚು ಮತದಾರರು ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 1400ಕ್ಕೂ ಹೆಚ್ಚು ಮತದಾರರು ಇದ್ದಾರೆ’ ಎಂದರು.
‘ದೇಶದ ಪ್ರಗತಿ ಬಗ್ಗೆ ರಾಜಕಾರಣಿಗಳಿಗೆ ಅರಿವು ಇರಬೇಕು. ಮಹತ್ವದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಹಾಳು ಮಾಡಿದ್ದು ಮಹಾತ್ಮಾ ಗಾಂಧೀಜಿ ಅವರಿಗೆ ಹೆಸರಿಗೆ ಮಸಿ ಬಡಿಯುವ ಕೆಲಸ ಮಾಡಿದೆ’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ಮಹೇಶ ಹೊಗೆಸೊಪ್ಪಿನ, ಸುರೇಶ ನಾವಿ, ಎಸ್.ಪಿ. ಬಳಿಗಾರ ಮಾತನಾಡಿದರು. ಈ ವೇಳೆ ವಿ.ಜಿ. ಪಡಿಗೇರಿ, ಅಂಬರೀಷ ತೆಂಬದಮನಿ, ಸೋಮಣ್ಣ ಬೆಟಗೇರಿ, ಆದಪ್ಪಗೌಡ್ರ, ರಂಜನ ಪಾಟೀಲ, ಗುರುನಾಥ ದಾನಪ್ಪನವರ, ದೀಪಕ ಲಮಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.