ಲಕ್ಷ್ಮೇಶ್ವರ: ಮೂಲಸೌಲಭ್ಯಗಳಾದ ಸುಸಜ್ಜಿತ ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಕುಡಿಯುವ ನೀರು ಒದಗಿಸಬೇಕಾಗಿರುವುದು ಆಯಾ ಗ್ರಾಮ ಪಂಚಾಯಿತಿಗಳ ಕರ್ತವ್ಯ. ಆದರೆ, ವ್ಯವಸ್ಥಿತ ಚರಂಡಿ ನಿರ್ಮಿಸದ ಕಾರಣ ಕೆಲ ಗ್ರಾಮ ಪಂಚಾಯಿತಿಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ.
ತಾಲ್ಲೂಕಿನ ಮಾಡಳಿ ಗ್ರಾಮದಲ್ಲಿ ಚರಂಡಿಗಳು ಗಲೀಜಿನಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಚರಂಡಿ ಸ್ವಚ್ಛಗೊಳಿಸದ ಕಾರಣ ಗ್ರಾಮದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ.
ಗ್ರಾಮದ 2ನೇ ವಾರ್ಡ್‌ನ ಕನ್ನಡ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಸಿ.ಡಿ ಒಡೆದ ಕಾರಣ ಅಲ್ಲಿನ ಚರಂಡಿ ಕಟ್ಟಿಕೊಂಡಿದ್ದು ಹೊಲಸು ನೀರು ಮುಂದೆ ಹರಿದು ಹೋಗುತ್ತಿಲ್ಲ. ಇದರಿಂದಾಗಿ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಕನ್ನಡ ಪ್ರಾಥಮಿಕ ಶಾಲೆ ಹತ್ತಿರದ ಬಸ್ ನಿಲ್ದಾಣದ ಎದುರಿನ ಚರಂಡಿ ಸಹ ಕೊಳಕಿನಿಂದ ತುಂಬಿಕೊಂಡಿದೆ. ಕೆಟ್ಟ ವಾಸನೆ ಬರುವುದರಿಂದ ಬಸ್ ನಿಲ್ದಾಣದಲ್ಲಿ ಯಾರೂ ಕುಳಿತುಕೊಳ್ಳಲಾರದ ಸ್ಥಿತಿ ನಿರ್ಮಾಣವಾಗಿದೆ.
ಚರಂಡಿಗಳನ್ನು ಬಳಸದೆ ಇರುವುದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭಯ ಜನರನ್ನು ಕಾಡುತ್ತಿದೆ. ಸದ್ಯ ಬೇಸಿಗೆ ಆಗಿರುವುದರಿಂದ ಚರಂಡಿಗಳಿಂದ ಮತ್ತಷ್ಟು ದುರ್ವಾಸನೆ ಹೊರ ಹೊಮ್ಮುತ್ತಿದ್ದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆಡಳಿತದ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
‘ನಮ್ಮೂರಿನ 2ನೇ ವಾರ್ಡ್‍ನಲ್ಲಿ ಚರಂಡಿ ಸ್ವಚ್ಛಗೊಳಿಸಿಲ್ಲ. ಬಸ್ ನಿಲ್ದಾಣದ ಎದುರಿನ ಗಟಾರ ಗಲೀಜಿನಿಂದ ತುಂಬಿಕೊಂಡಿದ್ದು ಕೆಟ್ಟ ವಾಸನೆ ಬರುತ್ತಿದೆ. ಚರಂಡಿ ಬಳಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಗ್ರಾಮ ಪಂಚಾಯಿತಿಯವರು ಚರಂಡಿ ಬಳಸಿ ಕೀಟನಾಶಕ ಸಿಂಪರಣೆ ಮಾಡಬೇಕು’ ಎಂದು ಗ್ರಾಮಸ್ಥರಾದ ಶಿವಾನಂದ ಮಾಡಳ್ಳಿ ಆಗ್ರಹಿಸಿದರು.
2ನೇ ವಾರ್ಡ್‍ಗೆ ಸಂಪರ್ಕ ಕಲ್ಪಿಸುವ ಸಿ.ಡಿ ಮುರಿದ ಪರಿಣಾಮ ಚರಂಡಿ ಮುಚ್ಚಿಕೊಂಡು ಸಮಸ್ಯೆ ಆಗಿದೆ. ಆದಷ್ಟು ಬೇಗನೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದುಎಂ.ಎನ್. ಮಲ್ಲೂರ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.