ADVERTISEMENT

ಲಕ್ಷ್ಮೇಶ್ವರ: ರೈತನಿಗೆ ಆದಾಯ ತರುವ ತರಕಾರಿ ಕೃಷಿ

ಚೆಂಡು ಹೂ ಮತ್ತು ಡೊಣ್ಣಮೆಣಸಿನಕಾಯಿ ಮಾರಾಟ: ₹1.50 ಲಕ್ಷ ಆದಾಯ

ನಾಗರಾಜ ಎಸ್‌.ಹಣಗಿ
Published 7 ನವೆಂಬರ್ 2025, 3:13 IST
Last Updated 7 ನವೆಂಬರ್ 2025, 3:13 IST
ಆಧುನಿಕ ಪದ್ಧತಿಯಲ್ಲಿ ಟೊಮೆಟೋ ಬೆಳೆದಿರುವ ಲಕ್ಷ್ಮೇಶ್ವರದ ಚಾಂದಸಾಬ್ ಚಂಗಾಪುರಿ
ಆಧುನಿಕ ಪದ್ಧತಿಯಲ್ಲಿ ಟೊಮೆಟೋ ಬೆಳೆದಿರುವ ಲಕ್ಷ್ಮೇಶ್ವರದ ಚಾಂದಸಾಬ್ ಚಂಗಾಪುರಿ   

ಲಕ್ಷ್ಮೇಶ್ವರ: ಲಭ್ಯವಿರುವ ಕೃಷಿಭೂಮಿಯಲ್ಲಿ ಒಂದೇ ತರದ ಬೆಳೆ ಬೆಳೆದು ನಷ್ಟ ಅನುಭವಿಸುವ ಬದಲು ಅದೇ ಭೂಮಿಯಲ್ಲಿ ವಿವಿಧ ಬೆಳೆ ಬೆಳೆದ ಪಟ್ಟಣದ ಚಾಂದಸಾಬ್ ಚಂಗಾಪುರಿ ಅವರು ಇತರೇ ರೈತರಿಗೆ ಮಾದರಿಯಾಗಿದ್ದಾರೆ.

ಚಾಂದಸಾಬ್ ಅವರಿಗೆ ಎರಡು ಎಕರೆ ನೀರಾವರಿ ಜಮೀನು ಇದ್ದು, ವಿವಿಧ ರೀತಿಯ ತರಕಾರಿ, ಹೂಗಳನ್ನು ಬೆಳೆದಿದ್ದಾರೆ. ತಲಾ ಹತ್ತು ಗುಂಟೆ ಭೂಮಿಯಲ್ಲಿ ಚಂಡು ಹೂ, ಡೊಣ್ಣಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಟೊಮೊಟೊ ಬೆಳೆಗಳನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಳೆದಿದ್ದಾರೆ.

ಚಾಂದಸಾಬ್‌ ಅವರು ಎಲ್ಲ ಬೆಳೆಗಳಿಗೂ ಪ್ಲಾಸ್ಟಿಕ್ ಮಲ್ಚಿಂಗ್ ಪದ್ದತಿ ಅಳವಡಿಸಿದ್ದು, ಇದರಿಂದ ಶೇ 30ರಷ್ಟು ನೀರಿನ ಬಳಕೆ ಕಡಿಮೆ ಆಗುತ್ತದೆ. ಟೊಮೊಟೊ ಬೆಳೆಗೆ ದಾರದಿಂದ ಎತ್ತಿ ಕಟ್ಟಿದ್ದು, ಇದರಿಂದ ಇಳುವರಿ ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಈ ಬೆಳೆಗಳು ನಾಲ್ಕು ತಿಂಗಳವರೆಗೆ ಫಸಲು ನೀಡುತ್ತವೆ.

ADVERTISEMENT

ಧಾರವಾಡದಿಂದ ಚೆಂಡು ಹೂವು, ದೊಡ್ಡಮೆಣಸಿನಕಾಯಿ, ಮೆಣಸಿನಕಾಯಿ, ಟೊಮೊಟೊ ಸಸಿ ತಂದು ನಾಟಿ ಮಾಡಿದ್ದಾರೆ. ಇದುವರೆಗೂ ಬೆಳೆಗಳಿಗೆ ₹1 ಲಕ್ಷ ಖರ್ಚು ಮಾಡಿದ್ದು, ಎಲ್ಲ ಬೆಳೆಗಳು ಉತ್ತಮ ಇಳುವರಿ ಕೊಡುತ್ತಿವೆ. 

ದೀಪಾವಳಿ ಹಬ್ಬದ ಸಮಯದಲ್ಲಿ ಚಂಡು ಹೂ ಮಾರಾಟದಿಂದ ₹60 ಸಾವಿರ, ದೊಡ್ಡಮೆಣಸಿನಕಾಯಿ ಹಾಗೂ ಹಸಿಮೆಣಸಿನಕಾಯಿ ಬೆಳೆಗಳಿಂದ ₹70 ಸಾವಿರ ಆದಾಯ ಪಡೆದಿದ್ದಾರೆ. ಇದೀಗ ಟೊಮೊಟೊ ಇಳುವರಿ ಬರುತ್ತಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಚಂಡು ಹೂ ಬೆಳೆಗೆ ಬೇಡಿಕೆ ಕಡಿಮೆ ಇದ್ದು, ಕಲ್ಲಂಗಡಿ ಬೆಳೆಯಲು ನಿರ್ಧರಿಸಿದ್ದಾರೆ. ಬೆಳೆಗಳಿಗೆ ಬರುವ ರೋಗಗಳ ನಿಯಂತ್ರಣಕ್ಕೆ ಸಾವಯವ ಪದ್ಧತಿಯ ಔಷಧ ಬಳಸುತ್ತಿದ್ದು, ಇದರಿಂದಾಗಿ ಇವರ ಬೆಳೆಗಳು ಆರೋಗ್ಯಯುತವಾಗಿ ಬೆಳೆದು ನಿಂತಿದ್ದು, ತರಕಾರಿ ಬೆಳೆಯುವ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

–––

ಮೊದಲ ಬಾರಿಗೆ ವಿವಿಧ ತರಕಾರಿ ಬೆಳೆದಿದ್ಧೇನೆ. ಚೆಂಡು ಹೂ ಮತ್ತು ಡೊಣ್ಣಮೆಣಸಿನಕಾಯಿ ಮಾರಾಟದಿಂದ ₹1.50 ಲಕ್ಷ ಆದಾಯ ಬಂದಿದೆ. ಇನ್ನು ಮೆಣಸಿನಕಾಯಿ ಮತ್ತು ಟೊಮೊಟೊ ಬೆಳೆಯಿಂದಲೂ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ

–ಚಾಂದಸಾಬ್ ಚಂಗಾಪುರಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.