ಲಕ್ಷ್ಮೇಶ್ವರ: ತಾಲ್ಲೂಕಿನ ಯಲ್ಲಾಪುರ ತಾಂಡಾದ ಲಂಬಾಣಿ ಸಮಾಜದವರು ಗುಡಗೇರಿ ಸಂಸ್ಥಾನದ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನುಗಳನ್ನು ಸಕ್ರಮಗೊಳಿಸಿ ಮಾಲೀಕತ್ವದ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಸೇವಾಲಾಲ ಕಲ್ಯಾಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ದೀಪಕ ಲಮಾಣಿ ಆಗ್ರಹಿಸಿದರು.
ಈ ಕುರಿತು ಸೋಮವಾರ ಅವರು ತಹಶೀಲ್ದಾರ್ ಧನಂಜಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಯಲ್ಲಾಪುರ ತಾಂಡಾದ ಲಂಬಾಣಿ ಸಮಾಜದವರು ಅತೀ ಕಡುಬಡವರಾಗಿದ್ದು, ಯಾವುದೇ ಮೂಲ ಸೌಲಭ್ಯ ಇಲ್ಲದೆ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದರು.
‘ತಾಲ್ಲೂಕಿನ ಬಾಲೇಹೊಸೂರು ಗ್ರಾಮದ ಸರಹದ್ದಿನಲ್ಲಿನ ಗೋಮಾಳಗಳಲ್ಲಿನ ರಿ.ಸ.ನಂ. 364ರಿಂದ 416ರವರೆಗಿನ ಸರ್ವೆ ನಂಬರಿನಲ್ಲಿ ತಮ್ಮ ಕೃಷಿ ಉಪಜೀವನಕ್ಕಾಗಿ 1941-42ರಿಂದ ಸಾಗುವಳಿ, ಉಳುಮೆ ಮಾಡಿಕೊಂಡು ಬಂದಿರುವ ಜಮೀನುಗಳಾಗಿವೆ. ಇವೇ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಿ ಅದರಲ್ಲಿ ಬಂದಂತಹ ಫಸಲಿನಿಂದ ನಮ್ಮ ಜೀವನ ನಡೆಸುತ್ತಿದ್ದಾರೆ’ ಎಂದು ವಿವರಿಸಿದರು.
ಸುಪ್ರೀಂಕೋರ್ಟ್ ಗುಡ್ಡಗಾಡು ಪ್ರದೇಶ ಮತ್ತು ಅರಣ್ಯ ಅವಲಂಬಿತ ಬುಡಕಟ್ಟು, ಅಲೆಮಾರಿ, ಅರಣ್ಯವಾಸಿ, ಗುಡ್ಡಗಾಡು ಪ್ರದೇಶಗಳಲ್ಲಿ, ಅರಣ್ಯ ಅವಲಂಬಿತ ಜನಾಂಗಗಳಿಗೆ ಕೃಷಿಯ ಉದ್ದೇಶಕ್ಕಾಗಿ ಸಾಗುವಳಿ ಮಾಡಿದ ಅರಣ್ಯ ಪ್ರದೇಶದ ಆಸ್ತಿ ಹಕ್ಕು ಪತ್ರ ಕೊಡಲು ಆದೇಶಿಸಿದೆ.
ಸಾಗುವಳಿ ಮಾಡಿ ಜೀವನೋಪಾಯ ಮಾಡುತ್ತಿರುವ ಎಲ್ಲರೂ ತಮ್ಮ ಸಂಪೂರ್ಣ ಸಾಗುವಳಿ ಮಾಡಿರುವ ಜಮೀನುಗಳನ್ನು ಸರ್ವೇಯರ್ ಅವರಿಂದ ಅಳತೆ ಮಾಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಅರಣ್ಯ ಹಕ್ಕು ಸಮಿತಿಯಲ್ಲಿ ಅವರ ಅರ್ಜಿಗಳನ್ನು ಕಳುಹಿಸದೇ, ಯಾವುದೇ ಬಲವಾದ ಪ್ರಕರಣಗಳು ಇಲ್ಲದೆ ಲಕ್ಷ್ಮೇಶ್ವರ ತಾಲ್ಲೂಕಿನ ತಹಶೀಲ್ದಾರರು ಸಾಗುವಳಿ ಮಾಡುವವರ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎದು ತಿಳಿಸಿದರು.
ಈ ಸಂದರ್ಭದಲ್ಲಿ ಶೇಖಪ್ಪ ಲಮಾಣಿ (ಅಕ್ಕಿಗುಂದ), ಗಣೇಶ ಲಮಾಣಿ, ಸೋಮಣ್ಣ ಲಮಾಣಿ, ಮಹಾದೇವಪ್ಪ ಲಮಾಣಿ, ಚನ್ನಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ಶೇಖಪ್ಪ ಲಮಾಣಿ, ಕೃಷ್ಣ ಲಮಾಣಿ, ಬಾವಣವ್ವ ಲಮಾಣಿ, ಗಂಗವ್ವ ಲಮಾಣಿ, ಶಾಂತವ್ವ ಲಮಾಣಿ ಸೇರಿದಂತೆ ಮತ್ತಿತರರು ಇದ್ದರು.
- ‘ಒಕ್ಕೆಲೆಬ್ಬಿಸಿದರೆ ಗಂಭೀರ ಪರಿಣಾಮ’
ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಕೂಡಾ ಅನೇಕ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಹತ್ತಾರು ದಶಕಗಳಿಂದ ಸದರ ಭೂಮಿಯ ಮೇಲೆ ಅವಲಂಬಿತರಾದ ಲಂಬಾಣಿ ಜನಾಚಿದವರಿಗೆ ಹಕ್ಕು ಪತ್ರ ನೀಡದೇ ಉದ್ದೇಶಪೂರ್ವಕವಾಗಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ’ ಎಂದರು. ಇಲ್ಲಿರುವ ಜನರಿಗೆ ಕೃಷಿಯನ್ನು ಹೊರತುಪಡಿಸಿ ಬೇರೆ ಯಾವ ಉದ್ಯೋಗವೂ ಬರುವುದಿಲ್ಲ. ಒಂದು ವೇಳೆ ಅವರನ್ನು ಜಮೀನಿನಿಂದ ಒಕ್ಕಲೆಬ್ಬಿಸಿ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿ ಹಕ್ಕುಪತ್ರವನ್ನು ನೀಡದಿದ್ದರೆ ಅವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ ಧನಂಜಯ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.