
ಗದಗ: ‘ಭಾಷೆ ಎನ್ನುವುದು ಕೇವಲ ಶಬ್ದ, ವಾಕ್ಯಗಳ ಸಂಯೋಜನೆಯಲ್ಲ. ಪ್ರತಿ ಭಾಷೆಯಲ್ಲೂ ಅದನ್ನು ಮಾತನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ. ಭಾಷೆ ಎಂದರೆ ಒಂದು ಪ್ರದೇಶದ, ಜನಾಂಗದ ಸಂಸ್ಕೃತಿಯೂ ಆಗಿದೆ’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗಗಳು, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್ ವತಿಯಿಂದ ಗುರುವಾರ ನಡೆದ ‘ಕನ್ನಡ ಕನ್ನಡಿಗ ಕರ್ನಾಟಕ’ ವಿಷಯ ಕುರಿತಾದ ನುಡಿ ಜಾಗೃತಿ ಗೀತಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕನ್ನಡ-ಕನ್ನಡಿಗ-ಕರ್ನಾಟಕತ್ವ ಎಂಬ ಧ್ಯೇಯದೊಂದಿಗೆ ನಾಡು, ನುಡಿಯ ಹಿರಿಮೆ, ಗರಿಮೆ ಎತ್ತಿ ಹಿಡಿಯುವಲ್ಲಿ ಕನ್ನಡ ಸಾಕ್ಷಿಪ್ರಜ್ಞೆಯಾಗಿ ವಿದ್ಯಾವರ್ಧಕ ಸಂಘ ನಿಂತಿದೆ. ಕನ್ನಡದ ಅಳಿವು ಉಳಿವಿಗಾಗಿ ಕೇವಲ ಮಾತನಾಡುವುದು ಮುಖ್ಯವಲ್ಲ. ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಗಳ ನಿಜವಾದ ರಕ್ಷಣೆ ನಡೆಯಬೇಕಿದೆ. ಈ ಕಾರ್ಯವನ್ನು ವಿದ್ಯಾವರ್ಧಕ ಸಂಘ ಹಲವು ದಶಕಗಳಿಂದ ಮಾಡುತ್ತಾ ಬಂದಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ‘ಕರ್ನಾಟಕದ ಭಾಷಾ ವೈವಿಧ್ಯತೆಗೆ ದೀರ್ಘಕಾಲದ ಇತಿಹಾಸ ಇದೆ. ಮೌರ್ಯರಿಂದ ಹಿಡಿದು ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯರು ಮತ್ತು ಹೊಯ್ಸಳರ ವಿಭಿನ್ನ ಆಡಳಿತ ಶೈಲಿ ಹಾಗೂ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು’ ಎಂದರು.
‘ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರಸ್ಥಾನ. ಇದು ನಮ್ಮ ರಾಜ್ಯಭಾಷೆಯೂ ಹೌದು, ಮಾತೃಭಾಷೆಯೂ ಹೌದು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕಿರುವುದು ಈ ಹೊತ್ತಿನ ತುರ್ತು’ ಎಂದರು.
ಪ್ರಾಚಾರ್ಯ ಎ.ಕೆ.ಮಠ ಸ್ವಾಗತಿಸಿದರು. ಕೊತಬಾಳದ ಶಂಕ್ರಣ್ಣ ಸಂಕಣ್ಣವರ ತಂಡದಿಂದ ಕನ್ನಡ ನಾಡು ನುಡಿ ಕುರಿತಾದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಪ್ರೊ. ಪಿ.ಜಿ. ಪಾಟೀಲ, ಪ್ರೊ. ನಾಗರಾಜ ಬಳಿಗೇರ, ಪ್ರೊ. ವಿಶ್ವನಾಥ ಜಿ., ಪ್ರೊ. ಅಂದಯ್ಯ ಅರವಟಗಿಮಠ ಉಪಸ್ಥಿತರಿದ್ದರು. ಪ್ರೊ. ರಾಮಚಂದ್ರ ಪಡೇಸೂರ, ಪ್ರೊ. ಸಂಗೀತಾ ವಣಗೇರಿ ಕಾರ್ಯಕ್ರಮ ನಿರೂಪಿಸಿದರು. ವೀರಣ್ಣ ಒಡ್ಡಿನ ವಂದಿಸಿದರು.
ಶೇ 80ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಭಾರತದಲ್ಲಿ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸದಿದ್ದರೆ ದೇಶದ ಬೆಳವಣಿಗೆ ಅಸಾಧ್ಯಪ್ರೊ. ಚಂದ್ರಶೇಖರ ವಸ್ತ್ರದ ಸಾಹಿತಿ
ಕನ್ನಡ ನಮ್ಮೆಲ್ಲರ ಜೀವಾಳ. ಮಾತೃಭಾಷೆ ಜತೆಗೆ ಇಂಗ್ಲಿಷ್ ಕಲಿಯಲು ಯಾವುದೇ ಅಭ್ಯಂತರವಿಲ್ಲ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕುಎಸ್.ಪಿ.ಸಂಶಿಮಠ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.