ಮೂಲೆಗುಂಪಾಗುತ್ತಿರುವ ಸ್ಥಳೀಯ ಒಕ್ಕಣೆ ಯಂತ್ರಗಳು
ರೋಣ: ತಾಲ್ಲೂಕಿನಾದ್ಯಂತ ಕೊಪ್ಪಳ, ಬಳ್ಳಾರಿ ಮತ್ತು ಹೊರ ರಾಜ್ಯಗಳಿಂದ ಬಂದ ಬೃಹತ್ ಒಕ್ಕಣೆ ಯಂತ್ರಗಳಲ್ಲಿ ಹಾವಳಿ ಜೋರಾಗಿದ್ದು, ರೋಣ ಪಟ್ಟಣದಲ್ಲಂತೂ ಊರ ಹೊರಗೆ ಇವುಗಳದ್ದೇ ಪಾರುಪತ್ಯ. ಹೊರಗಿನಿಂದ ಬಂದಿರುವ ಬೃಹತ್ ಒಕ್ಕಣೆ ಯಂತ್ರಗಳಿಂದಾಗಿ ಸ್ಥಳೀಯ ಯಂತ್ರಗಳಿಗೆ ಕೆಲಸವಿಲ್ಲದಂತಾಗಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ರೋಣ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಸ್ಥಳೀಯ ಒಕ್ಕಣೆ ಯಂತ್ರಗಳಿಗೆ ಭಾರಿ ಬೇಡಿಕೆ ಇತ್ತು. ಆ ದಿನಗಳಲ್ಲಿ ಮಾಲೀಕರು ಮತ್ತು ಕಾರ್ಮಿಕರಿಗೆ ಊಟ ಮಾಡಲು ಸಹ ಪುರುಸೊತ್ತು ಸಿಗುತ್ತಿರಲಿಲ್ಲ. ಅಷ್ಟೊಂದು ದುಡಿಮೆ ಇತ್ತು. ಇವುಗಳನ್ನೇ ನಂಬಿಕೊಂಡ ಕೆಲವು ಮಹಿಳಾ ಕಾರ್ಮಿಕರು ವರ್ಷಕ್ಕೆ ಬೇಕಾದಷ್ಟು ಕಾಳುಕಡಿ ಸಂಗ್ರಹಿಸುತ್ತಿದ್ದರು. ಅದರಿಂದಲೇ ವರ್ಷಪೂರ್ತಿ ಕುಟುಂಬದ ಸದಸ್ಯರ ಹೊಟ್ಟೆ ತುಂಬುತ್ತಿತ್ತು. ಆದರೆ ಬದಲಾದ ಸಂದರ್ಭದಲ್ಲಿ ಆಧುನಿಕತೆಯ ಭರಾಟೆಗೆ ಸಿಲುಕಿದ ಕೃಷಿ ನಿಧಾನವಾಗಿ ಯಂತ್ರಗಳ ಮೊರೆ ಹೋಗುತ್ತಿದ್ದು ಸದ್ಯ ಸ್ಥಳೀಯ ಒಕ್ಕಣೆ ಯಂತ್ರಗಳ ಮೇಲೆ ಅವಲಂಬಿತರಾದ ಮಾಲೀಕರು ಮತ್ತು ಕಾರ್ಮಿಕರನ್ನು ಚಿಂತೆಗೀಡು ಮಾಡಿವೆ.
ರೋಣ ತಾಲ್ಲೂಕಿನ ಪ್ರಮುಖ ಮುಂಗಾರು ಬೆಳೆಯಾದ ಹೆಸರು, ಮೆಕ್ಕೆಜೋಳ ಮತ್ತು ಹಿಂಗಾರು ಬೆಳೆಯಾದ ಕಡಲೆಗೆ ಈ ಯಂತ್ರಗಳೇ ರೈತರಿಗೆ ಆಸರೆ ಎಂಬುವಂತಾಗಿದ್ದು, ಕೃಷಿ ಕಾರ್ಮಿಕರ ಕೊರತೆಯೇ ಯಂತ್ರಗಳ ಮೊರೆ ಹೋಗಲು ಪ್ರಮುಖ ಕಾರಣ ಎಂಬುದು ಸ್ಥಳೀಯ ರೈತರ ಅಭಿಪ್ರಾಯವಾಗಿದೆ.
ಹೆಸರು ಕಟಾವು ಮತ್ತು ಈರುಳ್ಳಿ ಕಳೆ ನಿರ್ವಹಣೆ ಒಟ್ಟಿಗೆ ಬರುವುದರಿಂದ ಆಳುಗಳ ಕೊರತೆ ಉಂಟಾಗುತ್ತಿದೆ. ಜತೆಗೆ ಕೂಲಿಯೂ ಹೆಚ್ಚಾಗಿದ್ದು, ಕೃಷಿ ಉತ್ಪನ್ನಗಳ ಮೇಲಿನ ವೆಚ್ಚ ಹೆಚ್ಚಾಗುತ್ತಲೇ ಇದೆ. ಆದಾಯ ಮಾತ್ರ ಇದ್ದಷ್ಟೇ ಇದೆ. ಈ ಬಾರಿ ಮಳೆಯ ಅಸಮರ್ಪಕತೆ, ರೋಗಭೀತಿ ಹಾಗೂ ಕೀಟಗಳ ಕಾಟ ವಿಪರೀತವಾಗಿದ್ದು ಇಳುವರಿ ಕುಂಠಿತವಾಗಿದೆ. ಸದ್ಯ ಹೆಸರು ಕಾಳಿನ ಬೆಲೆ ಹೆಚ್ಚಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದಿರುವುದರಿಂದ ಸಾಧ್ಯವಾದಷ್ಟು ಖರ್ಚು ಕಡಿಮೆ ಮಾಡಲು ಬೃಹತ್ ಒಕ್ಕಣೆ ಯಂತ್ರಗಳೇ ಉಳಿದಿರುವ ಮಾರ್ಗ ಎಂಬುದು ಸ್ಥಳೀಯ ರೈತರ ಅನಿಸಿಕೆಯಾಗಿದೆ.
‘ಹೆಸರು ಬಿಡಿಸಲು ಬೇಕಾದಷ್ಟು ಆಳುಗಳು ಸಿಗುತ್ತಿಲ್ಲ. ಸಿಕ್ಕರೂ ದಿನಕ್ಕೆ ₹300 ಕೂಲಿ ಕೇಳುತ್ತಾರೆ. ಒಂದು ಎಕರೆಗೆ 10 ಆಳು ಎಂದು ಲೆಕ್ಕ ಹಾಕಿದರು ₹3,000 ಕೂಲಿ ಆಗುತ್ತದೆ. ಆದರೆ ಅದೇ ಬೃಹತ್ ಯಂತ್ರ ₹1,500 ಕಟಾವು ಮಾಡುತ್ತದೆ. ಹೀಗಾಗಿ ರೈತರು ಸಾಧ್ಯವಾದಷ್ಟು ಖರ್ಚು ಕಡಿಮೆ ಮಾಡಲು ಅನಿವಾರ್ಯವಾಗಿ ಬೃಹತ್ ಒಕ್ಕಣೆ ಯಂತ್ರಗಳ ಮೊರೆ ಹೋಗುವಂತಾಗಿದೆ’ ಎನ್ನುತ್ತಾರೆ ಸ್ಥಳೀಯ ರೈತ ಭರಮಪ್ಪ.
10ರಿಂದ 15 ದಿನಗಳಲ್ಲಿ ಸಂಪೂರ್ಣ ತಾಲ್ಲೂಕಿನ ಹೆಸರು ಒಕ್ಕಣೆ ಮಾಡಿ ಮರಳಿ ತಮ್ಮ ಊರುಗಳಿಗೆ ತೆರಳುವ ಈ ಬೃಹತ್ ಯಂತ್ರಗಳು, ಸ್ಥಳೀಯ ಒಕ್ಕಣೆ ಯಂತ್ರಗಳ ಮಾಲೀಕರು ಮತ್ತು ಕಾರ್ಮಿಕರನ್ನು ಕಂಗಾಲು ಮಾಡಿವೆ. ಜತೆಗೆ ಸಣ್ಣಪುಟ್ಟ ರಸ್ತೆಗಳನ್ನು ಹೊಂದಿರುವ ರೋಣದಂತಹ ಪಟ್ಟಣಗಳಲ್ಲಿ ಇರುವಷ್ಟು ದಿನ ಸಂಚಾರ ಸಮಸ್ಯೆಯನ್ನು ಸೃಷ್ಟಿಸಿವೆ.
ಸುಗ್ಗಿಯ ದಿನಗಳಲ್ಲಿ ರೈತರು ಹಟಕ್ಕೆ ಬಿದ್ದವರಂತೆ ನಮ್ಮ ಬೆನ್ನು ಬಿದ್ದು ರಾಶಿ ಮಾಡಲು ಕರೆದುಕೊಂಡು ಹೋಗುತ್ತಿದ್ದರು. ಯಂತ್ರಗಳು ಬಂದು ನಮ್ಮ ಕೆಲಸ ಕಸಿದಿವೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆಮಾದೇವಿ, ಕೃಷಿ ಕಾರ್ಮಿಕ ಮಹಿಳೆ
ಸರ್ಕಾರದ ಸಬ್ಸಿಡಿ ಹಣ ಜೊತೆಗೆ ದುಡಿದ ಹಣದಿಂದ ಒಕ್ಕಣೆ ಯಂತ್ರ ತಂದಿದ್ದೆವು. ಬೃಹತ್ ಒಕ್ಕಣೆ ಯಂತ್ರ ಖರೀದಿಸಲು ₹20 ಲಕ್ಷದಿಂದ₹25 ಲಕ್ಷ ಬೇಕು. ಅಷ್ಟು ದುಡ್ಡು ಎಲ್ಲಿಂದ ಬರಬೇಕು?ಸಣ್ಣಹನುಮಪ್ಪ, ಸ್ಥಳೀಯ ಒಕ್ಕಣೆ ಯಂತ್ರದ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.