ನರಗುಂದ: ‘ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರು ಮೀಸಲಾತಿಗೆ ಆಗ್ರಹಿಸಿ ಶಾಂತವಾಗಿ ಹೋರಾಟ ನಡೆಸಿದ್ದರು. ಆದರೂ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಖಂಡನೀಯ. ಇದು ಸರ್ಕಾರಿ ಪ್ರಾಯೋಜಿತ ಲಾಠಿ ಚಾರ್ಜ್’ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ತಾಲ್ಲೂಕಿನ ಹುಣಸಿಕಟ್ಟಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಮ್ಮ ಬೇಡಿಕೆ ನ್ಯಾಯಯುತವಾಗಿದೆ. ಹೋರಾಟ ಹತ್ತಿಕ್ಕುವ ಹುನ್ನಾರದಿಂದ ಲಾಠಿ ಚಾರ್ಜ್ ಮಾಡಿದ್ದು ಕಾನೂನು ಬಾಹಿರವಾಗಿದೆ’ ಎಂದರು.
‘ಎಡಿಜಿಪಿ ಯಾವುದೇ ನಿಯಮ ಪಾಲಿಸದೇ ಮನಸ್ಸೋ ಇಚ್ಛೆ ಲಾಠಿ ಚಾರ್ಜ್‌ಗೆ ಆದೇಶ ಮಾಡಿದ್ದಾರೆ. ಲಾಠಿ ಚಾರ್ಜ್ ಮಾಡಬೇಕಾದ ಅಧಿಕಾರಿಗಳು ಸಮವಸ್ತ್ರದಲ್ಲಿ ಇರಬೇಕು. ಆದರೆ ಅದನ್ನು ಪಾಲಿಸದೇ ಅಮಾನವೀಯವಾಗಿ ಎಡಿಜಿಪಿ ತಾವೇ ಸ್ವತಃ ಲಾಠಿ ಪ್ರಹಾರ ಮಾಡಿದ್ದಾರೆ. ಲಾಠಿ ಚಾರ್ಜ್ ಮಾಡುವ ಸಂದರ್ಭದಲ್ಲಿ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು. ಅವರಾರೂ ಅಲ್ಲಿಲ್ಲ. ಲಾಠಿ ಚಾರ್ಜ್ ಮಾಡುವ ಪೂರ್ವದಲ್ಲಿ ಅಶ್ರುವಾಯು ಪ್ರಯೋಗಿಸಬೇಕು. ಧ್ವನಿವರ್ಧಕದ ಮೂಲಕ ಎಚ್ಚರಿಸಬೇಕು. ಅದಾವುದು ಪಾಲನೆಯಾಗಿಲ್ಲ’ ಎಂದರು.
‘ಎಡಿಜಿಪಿಗೆ ಶಿಕ್ಷೆ ಆಗಬೇಕು. ಶಿಕ್ಷೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಸೋಮವಾರದಿಂದ ಧರಣಿ ಸತ್ಯಾಗ್ರಹ ನಡೆಯುತ್ತದೆ. ಅದಕ್ಕೆ ನಮ್ಮಿಂದ ಸಂಪೂರ್ಣ ಬೆಂಬಲವಿದೆ’ ಎಂದು ತಿಳಿಸಿದರು.
ಆರ್.ಬಿ. ಅಳಗವಾಡಿ, ಬಿ.ಬಿ. ಐನಾಪುರ, ಬಸನಗೌಡ ಪಾಟೀಲ, ನವೀನ ಪಾಟೀಲ, ಸಿದ್ನಾಳ, ಚಂದ್ರು ದಂಡಿನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.