
ಗದಗ: ‘ಇಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳು ರಾಷ್ಟ್ರ, ರಾಜ್ಯದಲ್ಲಿ ಜಾತಿ, ಜಾತಿ ಮಧ್ಯೆ ವಿಷ ಬೀಜ ಬಿತ್ತಿ, ದಲಿತ ಯುವಪೀಳಿಗೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ನಿಜವಾಗಲೂ ಹಿಂದೂಪರ ಸಂಘಟನೆಗಳಿಗೆ ಸ್ವಾಭಿಮಾನ ಇದ್ದರೆ ದಲಿತರನ್ನು ತಮ್ಮ ಸಂಘಟನೆಗಳಲ್ಲಿ ಸೇರಿಸಿಕೊಳ್ಳದೆ ಹೋರಾಟ, ಸಂಘಟನೆಗಳನ್ನು ಮಾಡಿ ತೋರಿಸಲಿ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗದಗ ಜಿಲ್ಲಾ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ ಅರಬರ ಹೇಳಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಗುರುವಾರ ಕೋರೆಗಾಂವ ವಿಜಯೋತ್ಸವನ್ನು ಸಾಮಾಜಿಕ ಸಮಾನತೆಯ ದಿನವನ್ನಾಗಿ ಆಚರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ಕೋರೇಗಾಂವ ಯುದ್ಧದಲ್ಲಿ ನೂರಾರು ಮಂದಿ ಮಹರ ಸೈನಿಕರು ಸಾವಿರಾರು ಮಂದಿ ಪೇಶ್ವೆ ಸೈನಿಕರನ್ನು ಹೊಡೆದು ಉರುಳಿಸಿದ್ದಾರೆ. ಇದರಿಂದ ದಲಿತ ಜನಾಂಗ ಎಷ್ಟು ಶಕ್ತಿಶಾಲಿ ಎಂಬುದು ಗೊತ್ತಾಗುತ್ತದೆ’ ಎಂದರು.
ಮುಖಂಡ ಹೊನ್ನಪ್ಪ ಸಾಕಿ ಮಾತನಾಡಿ, ‘ದಲಿತರು 98 ವರ್ಷಗಳಿಂದ ಸ್ವಾಭಿಮಾನದ ಯುದ್ಧದಲ್ಲಿ ಹೋರಾಡುತ್ತಲೇ ಇದ್ದಾರೆ. ಇದನ್ನು ಜಾತಿವಾದಿಗಳು, ದಲಿತ ವಿರೋಧಿಗಳು ದಲಿತರ ಸ್ವಾಭಿಮಾನ ಯುದ್ಧದ ಜಯವನ್ನು ಮರೆಮಾಚಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅಂಬೇಡ್ಕರ್ ಅವರು ಅದನ್ನೆಲ್ಲ ಲೆಕ್ಕಿಸದೆ 1927ರಂದು ಆ ಯುದ್ಧ ನಡೆದ ಸ್ಥಳಕ್ಕೆ ಭೇಟಿ ನೀಡಿ, ಯುದ್ಧದ ಸಂಪೂರ್ಣ ವಿಜಯೋತ್ಸವದ ಮಾಹಿತಿಯನ್ನು ನಮ್ಮ ಜನರಿಗೆ ತಲುಪಿಸಿದ್ದಾರೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಗೋಕಾವಿ, ಪೂಜಾ ಬೇವೂರ, ಹೊನ್ನಪ್ಪ ಸಾಕಿ, ಮಾರುತಿ ಅಂಗಡಿ, ಕೆಂಚಪ್ಪ ಮ್ಯಾಗೇರಿ, ನಿಂಗಪ್ಪ ದೊಡ್ಡಮನಿ, ಹನಮಂತ ದೊಡ್ಡಮನಿ, ಮೃತ್ಯುಂಜಯ ದೊಡ್ಡಮನಿ, ಮಹಾಂತೇಶ ದೊಡ್ಡಮನಿ, ಮಂಜುನಾಥ ಮಾಟಿನ್, ಹನಮಂತ ತಳ್ಳಿಹಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.