ಗದಗ: ‘ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ಕೇಳಲು ಅಸಹ್ಯ ಎನಿಸುವಂತಹ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅವರ ವಿರುದ್ಧ ಸರ್ಕಾರ ಶಿಸ್ತುಕ್ರಮ ಕೈಗೊಳ್ಳುವುದರ ಜತೆಗೆ ಗದಗ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಜಿಲ್ಲೆಗಳಿಗೂ ಅವರ ಪ್ರವೇಶ ನಿರ್ಬಂಧಿಸಬೇಕು’ ಎಂದು ಚಿಂತಕ ಅಶೋಕ ಬರಗುಂಡಿ ಆಗ್ರಹಿಸಿದರು.
‘ವಚನ ಸಂವಿಧಾನ ನಾಡಿನ ಜನರನ್ನು ಒಗ್ಗೂಡಿಸುತ್ತದೆ. ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ಅದಕ್ಕೆ ಪೂರಕವಾಗಿದೆ. ಹೀಗಾಗಿ ಬಸವ ಸಂಸ್ಕೃತಿ ಅಭಿಯಾನವನ್ನು ರಾಜ್ಯದಾದ್ಯಂತ ನಡೆಸಲಾಯಿತು. ಆದರೆ, ಬಸವ ಸಂಸ್ಕೃತಿ ಹಾಗೂ ಅಭಿಯಾನ ವಿರೋಧಿಸಿ ಕನೇರಿ ಶ್ರೀಗಳು ನಾಡಿನ 400 ಮಂದಿ ಲಿಂಗಾಯತ ಮಠಾಧೀಶರ ಹುಟ್ಟಿನ ಮೂಲಕ್ಕೆ ಕೈಹಾಕಿದ್ದಾರೆ. ಒಬ್ಬ ಸ್ವಾಮೀಜಿಯಾಗಿ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಅಪಮಾನಿಸಿದ್ದಾರೆ. ಇದು ಗುರುಗಳಿಗೆ ಮಾಡಿದ ಅವಮಾನವಷ್ಟೇ ಅಲ್ಲ; ಇಡೀ ನಾಡಿಗೆ ಮಾಡಿದ ಅಪಮಾನ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.
‘ರಾಜ್ಯ ಸರ್ಕಾರ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಕ್ಕೆ ಮನುವಾದಿಗಳು ಬೆಚ್ಚಿಬಿದ್ದಿದ್ದಾರೆ. ಬಸವ ತತ್ವದ ವಿರುದ್ಧ ಮಠಾಧೀಶರ ಮೂಲಕ ಪ್ರತಿಕ್ರಾಂತಿ ರೂಪಿಸಿ ಸಮಾಜ ಒಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ಲಿಂಗಾಯತ ಮಠಾಧೀಶರನ್ನು ಕೊಳಕು ಶಬ್ದಗಳಲ್ಲಿ ನಿಂದಿಸಿದ್ದು ಖಂಡನಾರ್ಹ. ಅವರು ಇದೇ ರೀತಿ ಮುಂದುವರಿಯುವುದಾದರೆ ಪೀಠ ತ್ಯಾಗ ಮಾಡಬೇಕು. ಇಂತಹ ಸ್ವಾಮೀಜಿಗಳ ಹೇಳಿಕೆ ಬೆಂಬಲಿಸಿರುವ ಬಿ.ಎಲ್.ಸಂತೋಷ್ ಹಾಗೂ ಶೋಭಾ ಕರಂದ್ಲಾಜೆ ಸಮಾಜಕ್ಕೆ ಏನು ಸಂದೇಶ ಕೊಡುವ ಪ್ರಯತ್ನ ನಡೆಸಿದ್ದಾರೆ’ ಎಂದು ಪ್ರಶ್ನಿಸಿದರು.
ಸಾಹಿತಿ ಬಸವರಾಜ ಸೂಳಿಭಾವಿ ಮಾತನಾಡಿ, ‘ಕನ್ನೇರಿ ಶ್ರೀಗಳನ್ನು ವಚನ ಪರಂಪರೆ, ಶರಣ ಪರಂಪರೆ ಅಥವಾ ಲಿಂಗಾಯತ ಪರಂಪರೆಯಿಂದ ನೋಡಲು ಸಾಧ್ಯವಿಲ್ಲ. ಈ ಬಗ್ಗೆ ಲಿಂಗಾಯತರು ಎಚ್ಚರ ವಹಿಸಬೇಕು’ ಎಂದರು.
‘ಕನೇರಿ ಶ್ರೀಗಳು ಆರ್‌ಎಸ್‌ಎಸ್‌ನಿಂದ ತಯಾರಾದ ಹೆಬ್ಬಾವು. ಮರಿಯಾಗಿ ಸೇರಿಕೊಂಡು, ಈಗ ಆರ್‌ಎಸ್‌ಎಸ್ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ. ಶರಣ ಹಾಗೂ ಬಸವ ಪರಂಪರೆಯಲ್ಲಿ ಇಡೀ ಸಮಾಜವನ್ನು ಸಮಾನತೆಯಿಂದ ಕಾಣಲಾಗುತ್ತದೆ. ಈ ಕಾರಣಕ್ಕಾಗಿಯೇ ಸನಾತನವಾದಿಗಳಿಗೆ ಬಸವಣ್ಣ ಗುರಿಯಾಗಿದ್ದಾನೆ. ಸಂಘ ಪರಿವಾರಕ್ಕೆ ಸಮಾನತೆಯ ಅಲರ್ಜಿ ಇದೆ’ ಎಂದು ದೂರಿದರು.
ನೂರು ವರ್ಷಗಳಲ್ಲಿ ಒಬ್ಬ ಮಹಿಳೆಯನ್ನು ಆರ್‌ಎಸ್‌ಎಸ್ ಗಣವೇಷಧಾರಿಯನ್ನಾಗಿ ಮಾಡಿಲ್ಲ. ಮಹಿಳೆಯರಿಗೆ ಸಮಾನತೆಯನ್ನೇ ನೀಡಿಲ್ಲ. ಮಹಿಳೆಯರನ್ನು ಸಮಾನವಾಗಿ ಕಾಣುವಂತಹ ಯಾವುದೇ ಪರಂಪರೆಯ ವಿರುದ್ಧ ಇವರು ಧ್ವನಿ ಎತ್ತುತ್ತಾರೆ. ಸಮಾನತೆ ಪ್ರತಿಪಾದನೆ ಮಾಡಿದ ಎಲ್ಲರ ವಿರುದ್ಧ ಪ್ರತಿಕ್ರಾಂತಿ ಮಾಡಿದ್ದಾರೆ. ಆ ಕಾರಣಕ್ಕಾಗಿಯೇ ಬಸವಣ್ಣ ಮತ್ತು ಸಂವಿಧಾನವನ್ನು ನಿರಾಕರಿಸುತ್ತಾರೆ ಎಂದು ಕಿಡಿಕಾರಿದರು.
ವಿವಿಧ ಸಂಘಟನೆಗಳ ಮುಖಂಡರಾದ ಶೇಖಣ್ಣ ಕವಳಿಕಾಯಿ, ಕೆ.ಎಸ್.ಚೆಟ್ಟಿ, ಡಾ. ಜಿ.ಬಿ.ಪಾಟೀಲ, ಚನ್ನಯ್ಯ ಹಿರೇಮಠ, ಪ್ರಭುಶಂಕರ ಗೌಡರ, ದಾನಯ್ಯ ಗಣಾಚಾರಿ, ಶೇಖಣ್ಣ ಕಳಸಾಪುರಶೆಟ್ರ, ಶಿವಕುಮಾರ್ ರಾಮನಕೊಪ್ಪ, ಸಿದ್ದಪ್ಪ ಮೂಗನೂರು, ಸಂಜಯ, ಮಂಜುನಾಥ ಅಡ್ನೂರು, ಧರ್ಮಪ್ಪ ಗುಂಡಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.