ADVERTISEMENT

ಶಿರಹಟ್ಟಿ ಶಾಸಕರ ಮೇಲೆ ಲೋಕಾಯುಕ್ತ ದಾಳಿ: ಕಾಂಗ್ರೆಸ್ ನಾಯಕರ ಕೈವಾಡ; ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:58 IST
Last Updated 22 ಫೆಬ್ರುವರಿ 2026, 0:58 IST
ಶಾಸಕ ಡಾ.ಚಂದ್ರು ಲಮಾಣಿ ಅವರಿಗೆ ಸೇರಿದ ಲಕ್ಷ್ಮೇಶ್ವರದ ಬಾಲಾಜಿ ಆಸ್ಪತ್ರೆ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು
ಶಾಸಕ ಡಾ.ಚಂದ್ರು ಲಮಾಣಿ ಅವರಿಗೆ ಸೇರಿದ ಲಕ್ಷ್ಮೇಶ್ವರದ ಬಾಲಾಜಿ ಆಸ್ಪತ್ರೆ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು   

ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಶನಿವಾರ ನಡೆದ ಲೋಕಾಯುಕ್ತ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.

ಗುತ್ತಿಗೆದಾರರೊಬ್ಬರಿಂದ ಶಾಸಕರ ಆಪ್ತರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ದಿಢೀರ್‌ ದಾಳಿ ನಡೆಸಿದರು. ಲೋಕಾಯುಕ್ತ ದಾಳಿ ವಿಷಯ ಗೊತ್ತಾಗುತ್ತಿದ್ದಂತೆ ಲಕ್ಷ್ಮೇಶ್ವರ, ಬೆಳ್ಳಟ್ಟಿ, ಶಿರಹಟ್ಟಿ, ಮುಂಡರಗಿ ತಾಲ್ಲೂಕುಗಳಿಂದ ಬಿಜೆಪಿಯ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಶಾಸಕರ ಪರವಾಗಿ ಘೋಷಣೆ ಕೂಗಿದರು.

‘ಶಾಸಕರ ಮೇಲೆ ನಡೆದ ಲೋಕಾಯಕ್ತ ದಾಳಿ ಹಿಂದೆ ಜಿಲ್ಲಾ ಕಾಂಗ್ರೆಸ್ ಪ್ರಭಾವಿ ಮುಖಂಡರೊಬ್ಬರ ಸಂಚು ಇದೆ. ಇದಕ್ಕೂ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ. ದಲಿತ ಶಾಸಕರ ಬೆಳವಣಿಗೆ ಸಹಿಸದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಷಡ್ಯಂತರ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ರೋಗಿಗಳ ತಪಾಸಣೆ ಉಚಿತ ನಡೆಸಿ ಔಷಧ ಅಷ್ಟೇ ಅಲ್ಲದೆ, ಫುಡ್‍ಕಿಟ್‍ಗಳನ್ನೂ ಕೊಟ್ಟಿದ್ದರು. ಅಲ್ಲದೆ ಶಾಸಕರಾದ ನಂತರ ಕ್ಷೇತ್ರದ ಅಭಿವೃದ್ಧಿ ಕುರಿತು ಸದನದಲ್ಲಿ ಧನಿ ಎತ್ತಿ ಮಾತನಾಡುತ್ತಿದ್ದರು. ಇವರ ಬೆಳವಣಿಗೆ ಕಾಂಗ್ರೆಸ್ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ಅವರ ವಿರುದ್ಧ ಸಂಚು ನಡೆಸಿ ಲೋಕಾಯುಕ್ತ ದಾಳಿ ಆಗುವಂತೆ ಮಾಡಿದ್ದಾರೆ’ ಎಂದು ಬಿಜೆಪಿ ಮುಖಂಡರಾದ ಶಂಕರ ಮರಾಠೆ, ನವೀನ ಹಿರೇಮಠ, ಬಸವರಾಜ ಚಕ್ರಸಾಲಿ, ಫಕ್ಕಿರೇಶ ರಟಗಡಿಹಳ್ಳಿ, ನಾಗರಾಜ ಲಕ್ಕುಂಡಿ ಆರೋಪಿಸಿದರು.

ADVERTISEMENT

ಈ ಮಧ್ಯೆ ಕೆಲ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆ ತಡೆ ನಡೆಸಲು ಮುಂದಾದರು. ಆದರೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಸಮಾಧಾನಪಡಿಸಿ ರಸ್ತೆ ಸಂಚಾರ ಬಂದ್ ಆಗದಂತೆ ನೋಡಿಕೊಂಡರು.

ಶಾಸಕ ಡಾ.ಚಂದ್ರು ಲಮಾಣಿ ಅವರ ಶನಿವಾರ ನಡೆದ ಲೋಕಾಯುಕ್ತ ದಾಳಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.