ADVERTISEMENT

ಶಿರಹಟ್ಟಿ ಪಶು ವೈದ್ಯಾಧಿಕಾರಿ ಡಾ.ನಿಂಗಪ್ಪ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 9:27 IST
Last Updated 9 ಡಿಸೆಂಬರ್ 2025, 9:27 IST
   

ಶಿರಹಟ್ಟಿ: ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ಸ್ಥಳೀಯ ಪಶು ವೈದ್ಯಾಧಿಕಾರಿ ಡಾ.ನಿಂಗಪ್ಪ ಓಲೇಕಾರ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.

2023-24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದ ಅಡಿಯಲ್ಲಿ ಶಿರಹಟ್ಟಿ ತಾಲ್ಲೂಕು ಪಂಚಾಯಿತಿಗೆ ಮಂಜೂರಾದ ಅನುದಾನ ₹ 2,16,97,377ದಲ್ಲಿ ಅಂದಾಜು ₹ 1,97,20,382ರಷ್ಟು ಅನುದಾನ ದುರ್ಬಳಕೆ ಮಾಡಿದ ಹಿನ್ನಲೆಯಲ್ಲಿ ದಾಳಿ ನಡೆದಿದೆ.

ಈ ಸಂಬಂಧ ಈ ಹಿಂದೆ ಶಿರಹಟ್ಟಿ ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಆಗಿ ಕಾರ್ಯನಿರ್ವಹಿಸಿದ್ದ ಡಾ. ನಿಂಗಪ್ಪ ಓಲೇಕಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ ಕಿರಿಯ ಎಂಜಿನಿಯರ್ ಆಗಿದ್ದ ಆರೀಫ್ ಹಿರೇಹಾಳ (ಪ್ರಸ್ತುತ ಸಹಾಯಕ ಎಂಜಿನಿಯರ್, ಧಾರವಾಡ), ಗುತ್ತಿಗೆದಾರ ಗಂಗಪ್ಪ ಬಸವಣೆಪ್ಪ ತಡಹಾಳ ಹಾಗೂ ವಿಜಯನಗರ ಏಜೆನ್ಸಿಯ ಪ್ರದೀಪಕುಮಾರ ಹಿರೇಮಠ ವಿರುದ್ಧ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಲೋಕಾಯುಕ್ತ ಪೊಲೀಸ್ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಗದಗ ಲೋಕಾಯುಕ್ತ ಕಚೇರಿಯ ಡಿವೈಎಸ್ಪಿ ವಿಜಯ ಬಿರಾದಾರ, ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಎಸ್.ತೇಲಿ, ವಿ.ಎಸ್.ದೀಪಾಲಿ ಸೇರಿದಂತೆ ಧಾರವಾಡ ಮತ್ತು ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಒಟ್ಟು 7 ಕಡೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.