ADVERTISEMENT

ಮಹಾಂತ ಶಿವಯೋಗಿಗಳ ಜಾತ್ರೆ ಇಂದು

ಅರಸರು ಅರ್ಪಿಸಿದ  ಮುತ್ತುರತ್ನ ಬಯಸದ ಬಾಲಲೀಲಾ ಮಹಾಂತ ಶಿವಯೋಗಿಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:15 IST
Last Updated 31 ಜನವರಿ 2026, 8:15 IST
ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠ.
ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠ.   

ಮುಳಗುಂದ: ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಗಳ 167ನೇಯ ಸ್ಮರಣೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ.

ಬಾಲಲೀಲಾ ಮಹಾಂತ ಶಿವಯೋಗಿಗಳು ರಾಜ ಮಹಾರಾಜರ ಸನ್ಮಾನಗಳಿಗೆ ಅಂಟಿಕೊಳ್ಳದೇ ಹಂಗಿಗೆ ಒಳಗಾಗದ ನಿರ್ಭಿಡೆಯ ಯೋಗಿ ಎಂದು ಜನಪ್ರಿಯತೆ ಗಳಿಸಿದವರು. ಇವರು ನಡೆದದ್ದೇ ದಾರಿ, ನುಡಿದದ್ದೇ ಹಾಡು, ಸಾಮಾನ್ಯ ಜನರ ಸಂಕಷ್ಟಗಳನ್ನು ದೂರ
ಗೊಳಿಸಿ, ಸರಳತೆ ಸಹಜ ಭಕ್ತಿಯೇ ಶಿವ
ನೊಲುಮೆಗೆ ಸಾಧನ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು.

ಶಿವಯೋಗಿಗಳು ಅಂತಃಸ್ಪೂರ್ತಿ ಬಂದಾಗ ಮಠದ ತೊಲೆ, ಬೋಧಿಗೆಯ ಮೇಲೆ ಬರೆದ ಅಂದಿನ ಹಾಡುಗಳನ್ನು ಸಂಗ್ರಹಿಸಿ, ಸಂರಕ್ಷಿಸಿರುವ ಅವರ ನೆಚ್ಚಿನ ಶಿಷ್ಯ ಮರಿದೇವರನ್ನು ಸ್ಮರಿಸಲೇಬೇಕು. ಆ ಹಾಡುಗಳ ಸಂಗ್ರಹವೇ ‘ಕೈವಲ್ಯ ದರ್ಪಣ’ ಎಂದು ಪ್ರಸಿದ್ಧಿಯಾಗಿದೆ.

ಜಗದ್ಗುರು ಎಂದಾಗುವವರು ಮೊದಲು ಜಗತ್ ಪುತ್ರರಾಗಬೇಕೆಂಬ ಸೂಚನೆ ಸ್ವಾಮಿಗಳಿಗೆ ಕೊಟ್ಟಿರುವುದು ಅತ್ಯಂತ ಮಾರ್ಮಿಕವಾಗಿದೆ. ಒಟ್ಟಾರೆ ಮಹಾಂತ ಶಿವಯೋಗಿಗಳವರ ಜೀವನ ಅಮೃತಮಯ, ತೇಜೋಪೂರ್ಣ.

ADVERTISEMENT

ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಭಕ್ತಿಪೂರ್ವಕವಾಗಿ ಬಾಲಲೀಲ ಮಹಾಂತ ಶಿವಯೋಗಿಗಳಿಗೆ ಕನಕಾಭಿಷೇಕವನ್ನು ಮಾಡಿದರು. ಕನಕಾಭಿಷೇಕ ಪ್ರಸಂಗದಲ್ಲಿ ಶಿವಯೋಗಿಗಳು ಆತ್ಮಲಿಂಗ ನಿರೀಕ್ಷೆಯಲ್ಲಿದ್ದರೆಂಬ ಸಂಗತಿ ಅಪೂರ್ವವಾದುದು. ಅರಸರು ಅರ್ಪಿಸಿದ ಮುತ್ತುರತ್ನಗಳನ್ನು ಬಯಸದೇ, ಮಹಾಂತ ಶಿವಯೋಗಿಗಳು ಕಲಾತ್ಮಕವಾದ ಒಂದು ಕುಂಬಳಕಾಯಿ ಬುರುಡೆಯನ್ನು ಮಾತ್ರ ಸ್ವೀಕರಿಸಿದರೆಂಬುದು ಈ ಮಹಿಮರ ಪರಿಪೂರ್ಣ ವೈರಾಗ್ಯ ನಿಷ್ಠೆಯನ್ನು, ನಿಜತತ್ವದ ನಿಲುವನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂದು ಪಡೆದ ಆ ಕುಂಬಳಕಾಯಿಯ ಬುರುಡೆ ಶ್ರೀಗಳ ಮಠದಲ್ಲಿ ಇಂದಿಗೂ ನೋಡಲು ಸಿಗುತ್ತದೆ.

1973ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಸ್ವಾಮೀಜಿ ಮಠದ ಜೀರ್ಣೋದ್ಧಾರ, ಸಾಮಾಜಿಕ ಸುಧಾರಣೆ, ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು, ಪಶುಪತಿಹಾಳ, ಕೆರೂರ, ಧಾರವಾಡ ಮುರುಘಾಮಠದ ಮಠಾಧ್ಯಕ್ಷರಾಗಿ ನೂರಾರು ಗ್ರಂಥ ಪುಸ್ತಕಗಳನ್ನು ಪ್ರಕಾಶಪಡಿಸಿದ ಸಾಹಿತ್ಯಾರಾಧಕರು. ಮುಳಗುಂದ ಗವಿಮಠವನ್ನು ಭಕ್ತಾದಿಗಳ ಸಹಾಯದಿಂದ ಸಮಗ್ರವಾಗಿ ಜಿರ್ಣೋದ್ಧಾರ ಮಾಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.