ADVERTISEMENT

ರೋಣ | ಪಂಚಾಯಿತಿ ನಿರ್ಲಕ್ಷ: ಅನೈರ್ಮಲ್ಯದ ತಾಣವಾದ ಮಲ್ಲಾಪುರ

ಗುಂಡಿ ಬಿದ್ದ ರಸ್ತೆಗಳಿಂದ ದುಸ್ತರವಾದ ಸಂಚಾರ; ಕಟ್ಟಿಕೊಂಡ ಚರಂಡಿಗಳು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:30 IST
Last Updated 5 ನವೆಂಬರ್ 2025, 4:30 IST
ಸಂಚರಿಸಲು ದುಸ್ತರವಾದ ಕೆಸರಿನ ರಸ್ತೆ
ಸಂಚರಿಸಲು ದುಸ್ತರವಾದ ಕೆಸರಿನ ರಸ್ತೆ   

ರೋಣ: ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ಮಲ್ಲಾಪುರವು ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ಅವ್ಯವಸ್ಥೆಯ ಆಗರವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮದ ಒಳಗಿನ ಸುಮಾರು ರಸ್ತೆಗಳು ಸಿಸಿ ರಸ್ತೆಗಳಾಗಿ ಬದಲಾಗದೆ ಮಣ್ಣಿನ ರಸ್ತೆಗಳಾಗಿ ಉಳಿದಿದ್ದು ಮಳೆಗಾಲ ಪ್ರಾರಂಭವಾದರೆ ಈ ರಸ್ತೆಗಳಲ್ಲಿ ಸಂಚರಿಸುವುದೇ ಗ್ರಾಮಸ್ಥರಿಗೆ ದುಸ್ತರವಾಗಿದೆ. ಗ್ರಾಮ ಪಂಚಾಯಿತಿ ಕಚೇರಿ, ದೇವಸ್ಥಾನ, ಶಾಲೆಗಳಂತಹ ಸಾರ್ವಜನಿಕ ಸ್ಥಳಗಳಿಗೆ ತೆರಳುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ.  ಅಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.

‘ಗ್ರಾಮದ ರಸ್ತೆಗಳು ಗುಂಡಿ ಬಿದ್ದು ಹೋಗಿದ್ದು ಈ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ನಿರ್ಮಿಸಬೇಕು. ಮಳೆಗಾಲದಲ್ಲಿ ಗ್ರಾಮದ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಚರಂಡಿಯಿಂದ ಹರಿದು ಬರುವ ಕೊಳಚೆ ನೀರು ರಸ್ತೆ ಮತ್ತು ಜನವಸತಿ ಪ್ರದೇಶಗಳಲ್ಲಿ ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಮಲ್ಲಾಪುರ ಗ್ರಾಮಸ್ಥ ಉಮೇಶ ವತ್ತಟ್ಟಿ ಹೇಳಿದರು.  

ADVERTISEMENT

ಹದಗೆಟ್ಟಿರುವ ಚರಂಡಿಗಳು:

ಗ್ರಾಮದಲ್ಲಿ ನಿರ್ಮಿಸಿರುವ ಚರಂಡಿಗಳು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಕೆಲವೆಡೆ ಚರಂಡಿ ನಿರ್ಮಿಸಿರುವ ಕಲ್ಲುಗಳು ಒಡೆದು ಬಿದ್ದು ಹೋಗದ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿವೆ. ಆದರೂ, ಸಂಬಂಧಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿ, ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ. ಚರಂಡಿಗಳ ಮೇಲೆ ಕಸಕಡ್ಡಿ ಬೆಳೆದು ಸಂಪೂರ್ಣ ಮುಚ್ಚಿ ಹೋಗುವ ಹಂತ ತಲುಪಿದ್ದರು ಸ್ಥಳೀಯ ಆಡಳಿತ ಮಾತ್ರ ಅದಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಗ್ರಾಮಸ್ಥರಲ್ಲಿ ಅಸಹನೆ ಮೂಡಿಸಿದೆ.

ಶೌಚಕ್ಕೆ ಬಯಲೇ ಗತಿ:

ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡದ ಕಾರಣ ಸಾರ್ವಜನಿಕರಿಗೆ ಮೂತ್ರವಿಸರ್ಜನೆ ಹಾಗೂ ಶೌಚಕ್ಕೆ  ಬಯಲೇ ಗತಿ ಎಂಬ ಪರಿಸ್ಥಿತಿ ಇದೆ. ಗ್ರಾಮದ ಪಕ್ಕದ ಹಳ್ಳ ಮತ್ತು ಸ್ಮಶಾನದ ಜಾಗೆಯೇ ಬಯಲು ಬಹಿರ್ದೆಸೆಯ ತಾಣವಾಗಿದೆ. ಸ್ಥಳೀಯ ಸರ್ಕಾರಗಳಿಗೆ ಗ್ರಾಮದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನೀಡುವ ಅನುದಾನವನ್ನು ಗ್ರಾಮ ಪಂಚಾಯಿತಿ ಏನು ಮಾಡುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. 

ಗ್ರಾಮದ ಜನವಸತಿ ಪ್ರದೇಶದಲ್ಲಿ ನಿಂತಿರುವ ಕೊಳಚೆ ನೀರು
ಗ್ರಾಮದ ಚರಂಡಿಗಳು ಸಂಪೂರ್ಣವಾಗಿ ಶಿಥಿಲಾವಸ್ತವನ್ನು ತಲುಪಿ ವರ್ಷಗಳೇ ಗತಿಸಿದರು ಅವುಗಳನ್ನು ಪುನರ್ ನಿರ್ಮಾಣ ಮಾಡುವುದಿರಲಿ ಕನಿಷ್ಠ ಕೆಲಸ ಮಾಡುವ ಕೆಲಸಕ್ಕೆ ಗ್ರಾಮ ಪಂಚಾಯಿತಿ ಮುಂದಾಗುತ್ತಿಲ್ಲ
ದಾನಪ್ಪ ದಾನಪ್ಪಗೌಡ್ರ ಮಲ್ಲಾಪುರ ಗ್ರಾಮಸ್ಥ
ಮಲ್ಲಾಪುರ ಗ್ರಾಮದ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಹೆಚ್ಚಿನ ಮಾಹಿತಿಯನ್ನು ಪಿಡಿಒ ಮುಖಾಂತರ ಪಡೆದು ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು
ಚಂದ್ರಶೇಖರ ಕಂದಕೂರ ತಾಲ್ಲೂಕು ಪಂಚಾಯಿತಿ ಇಒ

ಸಾರ್ವಜನಿಕರ ಉಪಯೋಗಕ್ಕೆ ಬಾರದ ಬಸ್ ನಿಲ್ದಾಣ

ರೋಣ– ನವಲಗುಂದ– ಹುಬ್ಬಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಾಗೂ ತಾಲ್ಲೂಕಿನಲ್ಲಿ ಹೊಳೆಆಲೂರು ಬಿಟ್ಟರೆ ಪ್ರಮುಖ ರೈಲು ನಿಲ್ದಾಣ ಹೊಂದಿರುವ ದೊಡ್ಡ ಗ್ರಾಮ ಮಲ್ಲಾಪುರ. ದಿನನಿತ್ಯ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರು ಸೇರಿದಂತೆ ಮಾರ್ಗ ಮಧ್ಯದಲ್ಲಿ ಹಲವಾರು ಪ್ರಯಾಣಿಕರು ಗ್ರಾಮದ ಬಸ್ ನಿಲ್ದಾಣಕ್ಕೆ ಬಂದು ಇಳಿಯುವುದು ಸಾಮಾನ್ಯವಾಗಿದೆ. ಇಂತಹ ಪ್ರಮುಖ ಗ್ರಾಮದಲ್ಲಿ ಪ್ರಯಾಣಿಕರಿಗೆ ಸೂಕ್ತ ನೆರಳು ಮತ್ತು ಮೂಲಸೌಕರ್ಯ ಒದಗಿಸಬಲ್ಲ ಬಸ್ ನಿಲ್ದಾಣದ ಸೌಲಭ್ಯವಿಲ್ಲ. ಸುಸಜ್ಜಿತ ನಿಲ್ದಾಣ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.