
ಲಕ್ಷ್ಮೇಶ್ವರ: ‘ಜನರ ಜತೆಗೂಡಿ ಈ ದೇಶವನ್ನು ಸದೃಢವಾಗಿ ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇದರಿಂದ ಪ್ರೇರಣೆ ಪಡೆದು ನಾವು ಕೂಡ ನಮ್ಮೂರಿನ ಅಭಿವೃದ್ಧಿಗೆ ನೆರವಾಗುವಂತಹ ಆದರ್ಶಯುತ ಯೋಜನೆಗಳನ್ನು ರೂಪಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಮನ್ ಕಿ ಬಾತ್ ವೀಕ್ಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ವಿಶೇಷ ಕಾರ್ಯಕ್ರಮ. ಜನರ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡು ದೇಶದ ಯಾವುದೇ ಮೂಲಕೆಯಲ್ಲಿ ಆಗುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ಇಡೀ ದೇಶಕ್ಕೆ ತಿಳಿಸಲಾಗುತ್ತಿದೆ. ಅವುಗಳಿಂದ ಪ್ರೇರಣೆ ಪಡೆಯಲು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ’ ಎಂದರು.
‘ಈ ಊರಲ್ಲಿ ಎಫ್‌ಪಿಒ ಬರುವ ಮೊದಲು ಮಣ್ಣು ಪರೀಕ್ಷೆ ಮಾಡಿಸಲು ಹುಲಕೋಟಿಗೆ ಹೋಗಬೇಕಿತ್ತು. ಈಗ ಇಲ್ಲಿಯೇ ಮಣ್ಣು ಪರೀಕ್ಷಾ ಕೇಂದ್ರ ಇದೆ. ನೀರಿನ ಪರೀಕ್ಷೆಯನ್ನೂ ಇಲ್ಲಿಯೇ ಮಾಡಬಹುದು. ಸಣ್ಣ ಸಂಸ್ಥೆ ಎಷ್ಟು ದೊಡ್ಡ ಕೆಲಸ ಮಾಡುತ್ತಿದೆ. ನಿರಂತರವಾಗಿ ಮನ್ ಕಿ ಬಾತ್ ಕೇಳುತ್ತಿದ್ದರೆ ಇಂತಹ ಹೊಸ ವಿಚಾರಗಳು ಮೂಡುತ್ತವೆ. ಇದೇ ವಿಕಸಿತ ಭಾರತದ ಉದ್ದೇಶ’ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ ಮಂಡಳದ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ ಇದ್ದರು.
‘ಆರ್ಥಿಕ ಶಕ್ತಿಯಾಗುವತ್ತ ಭಾರತ’
‘ಭಾರತ ಆರ್ಥಿಕವಾಗಿ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ. ಜನರ ದುಡಿಮೆಯಿಂದ ದೇಶ ಬೆಳೆಯುತ್ತದೆ. ರೈತರು ಕೂಲಿ ಕಾರ್ಮಿಕರಿಂದ ದೇಶದ ಉತ್ಪಾದನೆ ಹೆಚ್ಚಾಗುತ್ತದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ‘ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ಕೆ–ಶಿಪ್ ಯೋಜನೆ ನಮ್ಮ ಕಾಲದಲ್ಲಿ ಆರಂಭವಾಗಿತ್ತು. ಅದನ್ನು ನಿಲ್ಲಿಸಿ ಈಗ ಮತ್ತೆ ಆರಂಭಿಸಿದ್ದಾರೆ. ಜನರ ಪರವಾಗಿರುವ ಕೆಲಸ ಆಗಬೇಕು ಅದೇ ಪ್ರಜಾಪ್ರಭುತ್ವದ ಗೆಲುವು’ ಎಂದರು.
ಬೆಳೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳು ಗೋಲ್‌ಮಾಲ್ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು-ಬಸವರಾಜ ಬೊಮ್ಮಾಯಿ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.