ADVERTISEMENT

ಗದಗ | ಉಪಜಾತಿ ಕಾಲಂನಲ್ಲಿ ಕುಣಬಿ ಅಂತ ಬರೆಸಿ: ಪಿಜಿಆರ್‌ ಸಿಂಧ್ಯಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:24 IST
Last Updated 18 ಸೆಪ್ಟೆಂಬರ್ 2025, 4:24 IST
ಪಿ.ಜಿ.ಆರ್. ಸಿಂಧ್ಯಾ
ಪಿ.ಜಿ.ಆರ್. ಸಿಂಧ್ಯಾ   

ಗದಗ: 'ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಅ.7ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಿದ್ದು, ಮರಾಠಿಗರು ಅನುಸೂಚಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಮರಾಠ, ಉಪಜಾತಿ ಕಾಲಂನಲ್ಲಿ ಕುಣಬಿ ಅಂತಲೂ, ಮಾತೃಭಾಷೆ ಕಾಲಂನಲ್ಲಿ ಮರಾಠಿ ಎಂದು ಬರೆಯಿಸಬೇಕು’ ಎಂದು ಮರಾಠ ಸಮಾಜದ ರಾಷ್ಟ್ರೀಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು.

‘ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮರಾಠಿ ಸಮುದಾಯದವರಿದ್ದು ಸರ್ಕಾರದ ಹಿಂದಿನ ಸಮೀಕ್ಷೆಯಲ್ಲಿ ಕೇವಲ 16 ಲಕ್ಷ ಮರಾಠಿಗರಿದ್ದಾರೆ ಎಂದು ಗುರುತಿಸಿದ್ದಾರೆ. ಇದರಿಂದಾಗಿ ನಮ್ಮ ಸಮಾಜದ ಜನರು ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಎಲ್ಲರೂ ಜಾತಿಗಣತಿಯಲ್ಲಿ ತಪ್ಪದೇ ಮೇಲ್ಕಂಡ ಒಮ್ಮತದ ಅಭಿಪ್ರಾಯವನ್ನು ಬರೆಯಿಸಬೇಕು’ ಎಂದು ಮನವಿ ಮಾಡಿದರು.

‘ಈಗಾಗಲೇ ಕೆಕೆಎಂಪಿ ರಾಜ್ಯ ಘಟಕದ ಅಧ್ಯಕ್ಷ ಸುರೇಶರಾವ್ ಸಾಠೆ ಅವರು ಈ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ’ ಎಂದು ಹೇಳಿದರು.

ADVERTISEMENT

‘800ರಿಂದ 900 ವರ್ಷಗಳ ಇತಿಹಾಸ ಹೊಂದಿರುವ ಮರಾಠಿಗರು ಮೂಲ ಕನ್ನಡಿಗರಾಗಿದ್ದು, ಅವರ ಮೂಲ ಕಸಬು ಕೃಷಿ (ಕುಣಬಿ) ಆಗಿದೆ. ಮರಾಠ ಸಮಾಜಕ್ಕೆ ಗೋಸಾಯಿಗಳು ಗುರುಗಳಾಗಿದ್ದಾರೆ. ಗೋಸಾಯಿ ಮಠವು ಈ ಹಿಂದೆ ಬೆಂಗಳೂರಿನಲ್ಲಿ 2,000 ಎಕರೆ ಪ್ರದೇಶ ಹೊಂದಿತ್ತು. ಸೂಕ್ತ ನಾಯಕರು ಇಲ್ಲದೇ ಅದನ್ನು ಕಳೆದುಕೊಳ್ಳಬೇಕಾಯಿತು. ಸಮರ್ಥ ನಾಯಕರು ಇಲ್ಲದೇ ಇರುವುದರಿಂದ ಹಿಂದೆ ಉಳಿದಿದ್ದೇವೆ’ ಎಂದರು.

ಮರಾಠ ವಿದ್ಯಾವರ್ಧಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಚವ್ಹಾಣ, ಕಾರ್ಯದರ್ಶಿ ಸುರೇಶ ಬೇಂದ್ರೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‍ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಾಜೀವ ರೋಖಡೆ, ಸಹ ಕಾರ್ಯದರ್ಶಿ ಎಂ.ಆರ್.ಅರಳಿಕಟ್ಟಿ, ಪ್ರಭು ಬೇಂದ್ರೆ, ವಿನೀತಕುಮಾರ ಜಗತಾಪ, ಮಹೇಶ ಶೆಟವಾಜಿ, ಶಿವಾಜಿ ಗ್ವಾರಿ ಸೇರಿದಂತೆ ಹಲವರು ಇದ್ದರು. 

ನಾವು ಸಾಮಾಜಿಕವಾಗಿ ಹಿಂದೆ ಉಳಿದಿಲ್ಲ; ಆರ್ಥಿಕವಾಗಿ ಹಿಂದೆ ಉಳಿದಿದ್ದೇವೆ. ಈಗಲಾದರೂ ನಾವೆಲ್ಲರೂ ಸಂಘಟಿತರಾಗಿ ಮುನ್ನಡೆಯಬೇಕಿದೆ. ಈಗ ಒದಗಿರುವ ಅವಕಾಶದಿಂದ ರಾಜ್ಯದಲ್ಲಿ ನಮ್ಮ ಜನಸಂಖ್ಯೆ ಎಷ್ಟಿದೆ ಎಂಬುದು ನಿಖರವಾಗಿ ತಿಳಿಯಲಿದೆ
ಪಿ.ಜಿ.ಆರ್‌.ಸಿಂಧ್ಯಾ ಮರಾಠ ಸಮಾಜದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.