ADVERTISEMENT

ಸಾಮೂಹಿಕ ವಿವಾಹ: ಅನ್ನದಾನೀಶ್ವರ ಮಹಾಸ್ವಾಮೀಜಿ ಆಶೀರ್ವಚನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 12:45 IST
Last Updated 10 ಫೆಬ್ರುವರಿ 2025, 12:45 IST
ಮುಂಡರಗಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿದರು
ಮುಂಡರಗಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿದರು   

ಮುಂಡರಗಿ: ‘ಜಗತ್ತಿನಲ್ಲಿ ಹಲವು ಧರ್ಮಗಳಿರುವಂತೆ ನಮ್ಮ ಪರಂಪರೆಯಲ್ಲಿ ಸತಿ–ಪತಿಗಳಿಗೂ ಒಂದು ಪವಿತ್ರವಾದ ಧರ್ಮವಿದೆ. ಭಾರತೀಯ ಸಂಸ್ಕೃತಿಯಲ್ಲಿ ಸತಿ–ಪತಿಗಳ ಧರ್ಮಕ್ಕೆ ತುಂಬಾ ಗೌರವವಿದ್ದು, ಅದು ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಂಡಿರುತ್ತದೆ’ ಎಂದು ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಸತಿ–ಪತಿಗಳು ದಾಂಪತ್ಯದಲ್ಲಿ ಪರೋಪಕಾರ, ಸಹಾಯ, ಸಹಕಾರ ಮೊದಲಾದ ಉದಾತ್ತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಿತ್ಯ ಕಾಯಕ ಹಾಗೂ ದಾಸೋಹಗಳನ್ನು ಕೈಗೊಳ್ಳಬೇಕು. ಅಂತಹ ದಾಂಪತ್ಯ ಸದಾ ಸುಖಿಯಾಗಿರುತ್ತದೆ’ ಎಂದು ತಿಳಿಸಿದರು.

ADVERTISEMENT

ಲಿಂಗನಾಯಕನಹಳ್ಳಿಯ ಶ್ರೀಚನ್ನವೀರ ಸ್ವಾಮೀಜಿ ಮಾತನಾಡಿ, ‘ಸತಿ, ಪತಿಗಳು ಒಂದೇ ರಥದ ಎರಡು ಚಕ್ರಗಳಿದ್ದಂತೆ. ಅದರಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ. ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಸಾಮರಸ್ಯದಿಂದ ಬದುಕಬೇಕು. ಇದೇ ನಿಜವಾದ ದಾಂಪತ್ಯ ಧರ್ಮವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹಿರೇಮಲ್ಲನಕೇರಿ ಶ್ರೀಚನ್ನಬಸವ ಸ್ವಾಮೀಜಿ, ಕುಕನೂರಿನ ಮಹಾದೇವ ಸ್ವಾಮೀಜಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಶಿಕ್ಷಕ ಎಸ್.ಎಸ್. ಇನಾಮತಿ, ನಾಗಭೂಷಣ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ಕನಕಗಿರಿಯ ಚನ್ನಮಲ್ಲ ಸ್ವಾಮೀಜಿ, ಶಿವಾನಂದ ದೇವರು, ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ವಿ.ಜೆ. ಹಿರೇಮಠ, ಉಪಾಧ್ಯಕ್ಷ ದೇವು ಹಡಪದ, ಮುದಿಯಪ್ಪ ಕುಂಬಾರ, ಕಾರ್ಯದರ್ಶಿ ಶಿವು ನಾಡಗೌಡ್ರ, ಸಹಕಾರ್ಯದರ್ಶಿ ಶಿವು ವಾಲಿಕಾರ, ಖಜಾಂಚಿ ನಾಗರಾಜ ಮುರಡಿ ಇದ್ದರು.

ಸಾಮೂಹಿಕ ವಿವಾಹ ಸಮಾರಂಭದಲ್ಲಿ 25 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮುಂಡರಗಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ನೂತನ ವಧು ವರರನ್ನು ಪೂಜ್ಯರು ಆಶೀರ್ವದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.