ADVERTISEMENT

ತಗ್ಗಿದ ಮತದಾನದ ಪ್ರಮಾಣ?

ಅಂತಿಮ ಅಂಕಿ ಅಂಶದ ನಂತರ ಸ್ಪಷ್ಟ ಚಿತ್ರಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:51 IST
Last Updated 24 ಏಪ್ರಿಲ್ 2019, 11:51 IST

ಗದಗ: 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. 2014ರಲ್ಲಿ ಶೇ 68.09 ರಷ್ಟು ಮತದಾನ ದಾಖಲಾಗಿತ್ತು. ಆದರೆ, ಈ ಬಾರಿ ಇದು (ಮಂಗಳವಾರ ಸಂಜೆ 5 ಗಂಟೆಯವರೆಗಿನ ಅಂಕಿ ಅಂಶದಂತೆ) ಶೇ 65.50 ಇಳಿದಿದೆ.

ಜಿಲ್ಲೆಯ ಗದಗ, ರೋಣ, ಶಿರಹಟ್ಟಿ, ನರಗುಂದ ಮತಕ್ಷೇತ್ರಗಳು ಸೇರಿ 4.30 ಲಕ್ಷ ಪುರುಷ, 4.23 ಲಕ್ಷ ಮಹಿಳೆ ಮತ್ತು 53 ಇತರೆ ಮತದಾರರು ಸೇರಿ ಒಟ್ಟು 8.54 ಲಕ್ಷ ಮತದಾರರಿದ್ದರು.ಇವರಲ್ಲಿ ಅಂದಾಜು 5.54 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ.

ಲ್ಲಾಡಳಿತವು ಮತದಾನದ ಅಂತಿಮ ಅಂಕಿ ಅಂಶಗಳನ್ನು ಪ್ರಕಟಿಸಿಲ್ಲ. ಏ.24ರಂದು ಅಂತಿಮ ಅಂಕಿ ಅಂಶ ಪ್ರಕಟಗೊಂಡ ನಂತರ ಶೇಕಡಾವಾರು ಮತದಾನದ ಪ್ರಮಾಣದಲ್ಲಿ ತುಸು ವ್ಯತ್ಯಾಸವಾಗುವ ಸಾಧ್ಯತೆ ಇದೆ.

ADVERTISEMENT

2014ಕ್ಕೆ ಹೋಲಿಸಿದರೆ (7.81 ಲಕ್ಷ) ಈ ಬಾರಿ ಮತದಾರರ ಸಂಖ್ಯೆ ಈ ಬಾರಿ 64 ಸಾವಿರದಷ್ಟು ಏರಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ, ಸಾಕಷ್ಟು ಜನರು ಹಕ್ಕು ಚಲಾಯಿಸಲು ಆಸಕ್ತಿ ತೋರಿಸಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾನ ಪ್ರಮಾಣ ಸರಾಸರಿ ಶೇ 67.28 ಇದ್ದರೆ, ಜಿಲ್ಲೆಯಲ್ಲಿ ಶೇ 68.09 ರಷ್ಟು ಮತದಾನ ದಾಖಲಾಗಿತ್ತು. ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇ 0.81ರಷ್ಟು ಹೆಚ್ಚಿನ ಮತದಾನ ಜಿಲ್ಲೆಯಲ್ಲಿ ದಾಖಲಾಗಿತ್ತು. ಶೇ 70.60ರಷ್ಟು ಪುರುಷರು, ಶೇ 65.51ರಷ್ಟು ಮಹಿಳಾ ಮತದಾರರು ಮತದಾನ ಮಾಡಿದ್ದರು.

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಶೇ 74.81ರಷ್ಟು ಮತದಾನ ದಾಖಲಾಗಿತ್ತು. ರಾಜ್ಯದ ಸರಾಸರಿ ಶೇ 71.91ಕ್ಕೆ ಹೋಲಿಸಿದರೆ, ಜಿಲ್ಲೆಯಲ್ಲಿ ಶೇ 2.9ರಷ್ಟು ಹೆಚ್ಚಿನ ಮತದಾನ ಆಗಿತ್ತು. 1957ರ ವಿಧಾನಸಭೆ ಚುನಾವಣೆಯಿಂದ ಇಲ್ಲಿಯವರೆಗೆ ಇದು ಜಿಲ್ಲೆಯಲ್ಲಿ ದಾಖಲಾಗಿರುವ ಗರಿಷ್ಠ ಪ್ರಮಾಣದ ಮತದಾನ ಪ್ರಮಾಣ. ಈ ಬಾರಿಯೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮಿತಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.