ADVERTISEMENT

‘ಜನಪರ ಹೋರಾಟಕ್ಕೆ ಸಂವಿಧಾನವೇ ಅಸ್ತ್ರ’

ಮೇ ಸಾಹಿತ್ಯ ಸಮ್ಮೇಳನದ ಚಿತ್ರಕಲಾ ಶಿಬಿರ; ಕಲಾವಿದ ಸೂರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಮೇ 2019, 12:27 IST
Last Updated 2 ಮೇ 2019, 12:27 IST
ಗದುಗಿನಲ್ಲಿ ಗುರುವಾರ ಕಲಾವಿದ ರಾ.ಸೂರಿ ಅವರು ಮೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಚಿತ್ರಕಲಾ ಶಿಬಿರ ಉದ್ಘಾಟಿಸಿದರು. ಪ್ರೇಮಾ ಹಂದಿಗೋಳ ಭರಮಗೌಡರ,ವಿಜಯ ಕಿರೆಸೂರ, ಪ್ರೊ. ಕೆ.ಎಚ್ ಬೇಲೂರ ಇದ್ದರು
ಗದುಗಿನಲ್ಲಿ ಗುರುವಾರ ಕಲಾವಿದ ರಾ.ಸೂರಿ ಅವರು ಮೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಚಿತ್ರಕಲಾ ಶಿಬಿರ ಉದ್ಘಾಟಿಸಿದರು. ಪ್ರೇಮಾ ಹಂದಿಗೋಳ ಭರಮಗೌಡರ,ವಿಜಯ ಕಿರೆಸೂರ, ಪ್ರೊ. ಕೆ.ಎಚ್ ಬೇಲೂರ ಇದ್ದರು   

ಗದಗ: ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎದುರಾಗಿರುವ ಕಾಲಘಟ್ಟ ಇದು. ಈ ಕಾಲದಲ್ಲಿ ಸಾಹಿತ್ಯ ಮತ್ತು ಕಲೆ ಎರಡೂ ಫ್ಯಾಸಿಸ್ಟರ ದಬ್ಬಾಳಿಕೆ ಎದುರಿಸಬೇಕಾಗಿದೆ’ ಎಂದು ಖ್ಯಾತ ಚಿತ್ರ ಕಲಾವಿದ ರಾ. ಸೂರಿ ಅಭಿಪ್ರಾಯಪಟ್ಟರು.

ನಗರದಲ್ಲಿ ನಡೆಯಲಿರುವ ಮೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ, ಗುರುವಾರ ನಡೆದ ಚಿತ್ರಕಲಾ ಶಿಬಿರಕ್ಕೆ ‘ಹೋರಾಟದ ಅಸ್ತ್ರವಾಗಿ ಸಂವಿಧಾನ’ ಎಂಬ ಶೀರ್ಷಿಕೆಯಡಿ ಚಿತ್ರ ಬಿಡಿಸಿ ಅವರು ಮಾತನಾಡಿದರು.

‘ಜನರ ಹಕ್ಕುಗಳನ್ನು ಅಭಿವೃದ್ಧಿ ಹೆಸರಲ್ಲಿ ಮೊಟಕುಗೊಳಿಸಲಾಗುತ್ತಿದೆ. ಇದರ ವಿರುದ್ಧದ ಹೋರಾಟಕ್ಕೆ ಮೇ ಸಾಹಿತ್ಯ ಮೇಳ ಸ್ಪೂರ್ತಿಯಾಗಲಿದೆ. ನಮ್ಮ ಹೋರಾಟಕ್ಕೆ ಕತ್ತಿ, ಚೂರಿ, ಬಂದೂಕು ಬೇಕಿಲ್ಲ, ಕೈಯಲ್ಲಿ, ಮೆದುಳಲ್ಲಿ, ಹೃದಯದಲ್ಲಿ ಸಂವಿಧಾನವಿರಲಿ, ಅದೇ ನಮ್ಮ ಹೋರಾಟದ ಅಸ್ತ್ರ’ ಎಂದರು.

ADVERTISEMENT

‘ಸ್ವಾತಂತ್ರ್ಯ ಮತ್ತು ಮೂಲಸೌಕರ್ಯ ಇಲ್ಲದೇ ಅಪ್ಪಟ ಮಾನವೀಯತೆಯ ಕಲೆ ಅರಳುವುದು ಅಸಾಧ್ಯ’ ಎಂದು ಪ್ರೇಮಾ ಹಂದಿಗೋಳ ಹೇಳಿದರು.

ಶಿಲಾಯುಗದಿಂದ ಈ ಶತಮಾನದವರೆಗೆ ಚಿತ್ರಕಲೆ ಬೆಳೆದು ಬಂದ ಘಟ್ಟಗಳನ್ನು ವಿವರಿಸಿದ ಅವರು, ‘ಅಕ್ಬರ್‌ ಕಾಲದಲ್ಲಿ ಭಾರತ ಮತ್ತು ಪರ್ಷಿಯಾದ ಕಲಾವಿದರು ಸೇರಿ, ಸಮಾಲೋಚಿಸಿ ರಚಿಸಿದ ಅಂತ:ಕರಣದ ಚಿತ್ರಗಳು ಇಂದಿಗೂ ನಮಗೆ ಮಾದರಿಯಾಗಿವೆ’ಎಂದರು.

‘ಯುದ್ಧದ ಭೀಕರತೆಯನ್ನು ಪಿಕಾಸೋ ತನ್ನ ಚಿತ್ರಗಳಲ್ಲೇ ಕಟ್ಟಿಕೊಟ್ಟ ಬಗೆಯನ್ನು ಶಿಬಿರದ ನಿರ್ದೇಶಕ ಭರಮಗೌಡರು ವಿವರಿಸಿದರು.
‘ಯುದ್ಧದ ಕ್ರೌರ್ಯದ ಕುರಿತು ಪಿಕಾಸೊ ರಚಿಸಿದ ಚಿತ್ರ ನೋಡಿದ ಹಿಟ್ಲರ್ ಯಾರು ಇದನ್ನು ರಚಿಸಿದ್ದು ಎನ್ನುತ್ತಾನೆ. ಅಲ್ಲೇ ಇದ್ದ ಪಿಕಾಸೋ ನೀವೇ ರಚಿಸಿದ್ದು ಎಂದು ಮಾರ್ಮಿಕವಾಗಿ ಹೇಳುತ್ತಾರೆ.ಸ್ವತಃ ಕಲಾವಿದನಾಗಿದ್ದ ಹಿಟ್ಲರ್ ಕ್ರೂರಿಯೂ ಆಗಿದ್ದ ಎಂಬುದು ವಿಚಿತ್ರವಾದರೂ ಸತ್ಯ’ ಎಂದು ಶಿಬಿರದ ಮತ್ತೋರ್ವ ನಿರ್ದೇಶಕ ವಿಜಯ ಕಿರೆಸೂರ ಅಭಿಪ್ರಾಯಪಟ್ಟರು.

ಪ್ರೊ. ಕೆ.ಎಚ್ ಬೇಲೂರು, ಬಿ. ಮಾರುತಿ ಮತ್ತು ಡಾ. ಎಸ್. ವಿ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.