
ಗಜೇಂದ್ರಗಡ: ಮಿಡಿಸೌತೆ ಬೆಳೆದ ರೈತರಿಗೆ ಫಸಲಿನ ಹಣ ನೀಡದೆ ಕಂಪನಿಯವರು ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ ಗುರುವಾರ ಪಟ್ಟಣದಲ್ಲಿರುವ ಪ್ರೆಶರ್ ಅಗ್ರೋ ಕಂಪನಿ ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ರೈತರು ವಾಗ್ವಾದ ನಡೆಸಿದರು.
ಪಟ್ಟಣದ ಗದಗ ರಸ್ತೆಯಲ್ಲಿರುವ ಪ್ರೆಶರ್ ಅಗ್ರೋ ಕಂಪನಿ ಕಚೇರಿ ಮುಂದೆ ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳ 10ಕ್ಕೂ ಹೆಚ್ಚು ರೈತರು ಬೆಳಗಿನಿಂದ ಸಂಜೆ ವರೆಗೆ ಕಂಪನಿಯ ಅಧಿಕಾರಿಗಳಿಗಾಗಿ ಕಾದು ಕುಳಿತಿದ್ದರು. ಸಂಜೆ ಬಂದ ಕಂಪನಿಯ ಅಧಿಕಾರಿ ಮುರ್ತುಜಾ ಗೊಣ್ಣಾಗರ ಆಗಮಿಸುತ್ತಿದ್ದಂತೆ ಆಕ್ರೋಶಗೊಂಡ ರೈತರು, ಮುರ್ತುಜಾ ಅವರನ್ನು ತರಾಟೆಗೆ ತೆಗೆದುಕೊಂಡರು.
‘ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕುಗಳ ಗಂಗನಾಳ, ಚಿಕ್ಕಸುಳಿಕೇರಿ, ಗೆದಗೇರಿ, ಗುಮ್ಮಗೇರಿ, ಜರಕುಂಟಿ, ವರ್ಜಬಂಡಿ ಗ್ರಾಮಗಳ 20ಕ್ಕೂ ಹೆಚ್ಚು ರೈತರು ಸುಮಾರು 20 ಎಕರೆ ಜಮೀನಿನಲ್ಲಿ ಮಿಡಿಸೌತೆ ಬೆಳೆದಿದ್ದಾರೆ. ರೈತರಿಗೆ ಪ್ರೆಶರ್ ಅಗ್ರೋ ಕಂಪನಿಯ ದುರಗೇಶ ಎಂಬುವವರು ಬಿತ್ತನೆಗೆ ಬೀಜ ನೀಡಿದ್ದು, ಕಂಪನಿಯ ಈ ಭಾಗದ ವ್ಯವಸ್ಥಾಪಕ ಮುರ್ತುಜಾ ಗೊಣ್ಣಾಗರ ಮೇಲುಸ್ತುವಾರಿ ಮಾಡುತ್ತಿದ್ದರು. ಆರಂಭದಲ್ಲಿ ಮಿಡಿಸೌತೆ ಖರಿದಿಸಿದ 3-4 ದಿನಗಳಲ್ಲಿ ಹಣ ಸಂದಾಯ ಮಾಡುತ್ತಿದ್ದರು. ಬಳಿಕ 15 ದಿನಕ್ಕೆ ಸಂದಾಯ ಮಾಡುತ್ತಿದ್ದರು. ಈಗ 3 ತಿಂಗಳಿಂದ ಪ್ರತಿಯೊಬ್ಬರ ರೈತರಿಗೆ ₹50 ಸಾವಿರದಿಂದ ₹2 ಲಕ್ಷದ ವರೆಗೆ ಬಾಕಿ ಉಳಿಸಿಕೊಂಡಿದ್ದಾರೆ. ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಎರಡ್ಮೂರು ಬಾರಿ ಗಜೇಂದ್ರಗಡದ ಕಚೇರಿಗೆ 40-50 ಕಿ.ಮೀ ದೂರದಿಂದ ಬಂದಾಗಲೂ ಸಿಕ್ಕಿಲ್ಲ. ಅಲ್ಲದೆ ರೈತರಿಂದ ಮಿಡಿಸೌತೆ ಪಡೆದ ತೂಕದ ವಿವರಗಳನ್ನು ರೈತರ ಪುಸ್ತಕದಲ್ಲಿ ಬರೆದುಕೊಟ್ಟು, ಕಚೇರಿಯ ಪುಸ್ತಕದಲ್ಲಿ ಕಡಿಮೆ ತೂಕ ಬರೆಯುತ್ತಿದ್ದಾರೆ. ರೈತರಿಗೆ ಈ ರೀತಿ ಮೋಸ ಮಾಡಿದರೆ ನಾವೇನು ಮಾಡಬೇಕು’ ಎಂದು ರೈತರಾದ ಶಿವಪ್ಪ ಗುಳೇದ, ಶರಣಬಸವ ಗಾಣದಾಳ, ನಾಗಪ್ಪ ಯಾಪಲದಿನ್ನಿ ಅಲವತ್ತುಕೊಂಡರು.
ಈ ಕುರಿತು ಪ್ರೆಶರ್ ಕಂಪನಿಯ ಗಜೇಂದ್ರಗಡ ಕಚೇರಿಯ ವ್ಯವಸ್ಥಾಪಕ ಮುರ್ತುಜಾ ಗೊಣ್ಣಾಗರ ಅವರನ್ನು ಪ್ರಶ್ನಿಸಿದಾಗ, ‘ನಮ್ಮ ಸಿಬ್ಬಂದಿ ಕಂಪನಿಗೆ ಸರಿಯಾಗಿ ರೈತರ ಮಾಹಿತಿ ಹಾಗೂ ಫಸಲಿನ ವಿವರ ನೀಡಿಲ್ಲ. ಹೀಗಾಗಿ ಈ ಸಮಸ್ಯೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.
ರೈತರಾದ ಶರಣಪ್ಪ ಚವಡಕಿ, ಆಕಾಶ ಯಾಪಲದಿನ್ನಿ, ರಾಮಣ್ಣ ಮಾಳೇಕೋಪ್ಪ, ವಿನೋದ ಮ್ಯಾಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.