ADVERTISEMENT

ಕ್ರೀಡಾಕ್ಷೇತ್ರಕ್ಕೆ ಗದಗ ಜಿಲ್ಲೆ ಕೊಡುಗೆ ಅಪಾರ: ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:50 IST
Last Updated 21 ಡಿಸೆಂಬರ್ 2025, 4:50 IST
ಗದಗ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನಿಕ್ವಾಯ್ಟ್‌ ಪಂದ್ಯಾವಳಿಯನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದಗ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನಿಕ್ವಾಯ್ಟ್‌ ಪಂದ್ಯಾವಳಿಯನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರಾದ ಗದಗ ಜಿಲ್ಲೆ, ಕ್ರೀಡಾಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದೆ. ಗದುಗಿನಿಂದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಾಕಿ, ಕ್ರಿಕೆಟ್, ಕುಸ್ತಿ, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗದಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನೆರವೇರಿದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನಿಕ್ವಾಯ್ಟ್‌ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

‘ಇಂತಹ ಗದಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಟೆನಿಕ್ವಾಯ್ಟ್‌ ಪಂದ್ಯಾಟಗಳು ನಡೆಯುತ್ತಿರುವುದು ಸ್ವಾಗತಾರ್ಹವಾಗಿದ್ದು, ಜಿಲ್ಲೆಯಿಂದ ಅನೇಕ ರಾಷ್ಟ್ರೀಯ ಮಟ್ಟದ ಟೆನಿಕ್ವಾಯ್ಟ್‌ ಕ್ರೀಡಾಪಟುಗಳು ಹೊರಹೊಮ್ಮಲಿ’ ಎಂದು ಆಶಿಸಿದರು. 

ADVERTISEMENT

‘ಸರ್ಕಾರದಿಂದ ಗದಗ ಜಿಲ್ಲೆಯ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಗಳನ್ನು ಆಡಿಸಬಹುದಾದಂತಹ ಮಹಾತ್ಮಗಾಂಧಿ ಹಾಕಿ ಟರ್ಫ್‌ ಗ್ರೌಂಡ್, ಕ್ರಿಕೆಟ್ ನೆಟ್ ಪ್ರಾಕ್ಟಿಸ್ ಗ್ರೌಂಡ್, ನಾಲ್ಕು ಈಜುಕೋಳಗಳು ಈಗಾಗಲೇ ಕ್ರೀಡಾಪಟುಗಳಿಗೆ ಸದ್ಭಳಕೆಯಾಗುತ್ತಿದ್ದು, ಶೀಘ್ರದಲ್ಲಿಯೇ ಕಳಸಾಪೂರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್ ಕೋರ್ಟ್‌ ಸಿದ್ದಪಡಿಸಲಾಗುವುದು’ ಎಂದರು.

‘ಕೆ.ಎಚ್.ಪಾಟೀಲ ಸ್ಟೇಡಿಯಂನಲ್ಲಿ ಪುಟ್‍ಬಾಲ್ ಟರ್ಫ್‌ ಮೈದಾನ ಮತ್ತು ಫೆಡ್‍ಲೈಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಎಲ್ಲ ಕ್ರೀಡಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು’  ಎಂದರು.

ಇದೇ ಸಂದರ್ಭದಲ್ಲಿ ಪ.ಪೂ.ಶಿ. ಇಲಾಖೆಯಲ್ಲಿ ಸಾಧನೆಗೈದ ಹಾಗೂ ಕ್ರೀಡಾಕೂಟಕ್ಕೆ ಸಹಾಯ, ಸಹಕಾರ ಸಲ್ಲಿಸಿದ ಮೇಜರ್ ಡಾ. ಪ್ರಾ. ಬಿ.ಎಸ್. ರಾಠೋಡ, ರಾಜೇಶ ಕುಲಕರ್ಣಿ, ಪ್ರಾ. ವಿ.ಎಸ್. ದಲಾಲಿ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ಗದಗ ಜಿಲ್ಲೆಯ ಪ.ಪೂ. ಕಾಲೇಜು ವಿದ್ಯಾರ್ಥಿಗಳನ್ನು, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ವಿಕಲಚೇತನ ಕ್ರೀಡಾಪಟುಗಳನ್ನು ಮತ್ತು ಜಿಲ್ಲಾ ಹಾಗೂ ತಾಲೂಕ ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಪ್ರಾಚಾರ್ಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್‌, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರುಡಗಿ, ಸಿದ್ದಲಿಂಗೇಶ ಪಾಟೀಲ ಇದ್ದರು.

ಪ್ರಾಚಾರ್ಯ ಸಂಘದ ಅಧ್ಯಕ್ಷ ಎಂ.ಸಿ.ಕಟ್ಟಿಮನಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ, ಪ್ರೊ. ಪ್ರಿಯಾಂಕ ಬೊಮ್ಮಾಯಿನವರ ನಿರೂಪಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್.ಸೋಮಣ್ಣವರ ವಂದಿಸಿದರು. ಡಿಡಿಪಿಯು ಸಿದ್ದಲಿಂಗ ಬಂಡು ಮಸನಾಯಿಕ, ಹಿರಿಯ ಪ್ರಾಚಾರ್ಯ ಜಿ.ಎನ್. ಕುರ್ತಕೋಟಿ, ಗಿರಿತಮ್ಮಣ್ಣವರ, ಜೆ.ಎ. ಶಿರಸಿ, ಹಾದಿಮನಿ, ಅಶೋಕ ಅಂಗಡಿ ವೇದಿಕೆಯಲ್ಲಿದ್ದರು.

30 ಶೈಕ್ಷಣಿಕ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಬಾಲಕ ಮತ್ತು ಬಾಲಕಿಯರ ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮಾಡಲು ಸರ್ಕಾರವು ಪ್ರಾಥಮಿಕ ಪ್ರೌಢ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಕ್ರಮವಹಿಸಬೇಕು
ಎಸ್.ವಿ.ಸಂಕನೂರ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.