ADVERTISEMENT

ಮನೆಯಿಂದ ತಂದಿದ್ದ ಚುರುಮುರಿ ತಿಂದು ಆರು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:48 IST
Last Updated 24 ಸೆಪ್ಟೆಂಬರ್ 2024, 15:48 IST
ಚುರುಮುರಿ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪರೀಕ್ಷಿಸಿದರು
ಚುರುಮುರಿ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪರೀಕ್ಷಿಸಿದರು   

ಗದಗ: ಮನೆಯಿಂದ ತಂದಿದ್ದ ಚುರುಮುರಿ ತಿಂದು ಆರು ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೆಟಗೇರಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.

‘ಬೆಟಗೇರಿಯಲ್ಲಿ ಇದೇ ವರ್ಷ ಆರಂಭಗೊಂಡಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ 50 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಎಲ್ಲ ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ ಉಪ್ಪಿಟ್ಟು ಸೇವಿಸಿದ್ದಾರೆ. ಈ ವೇಳೆ ಒಬ್ಬ ವಿದ್ಯಾರ್ಥಿನಿ ಮನೆಯಿಂದ ತಂದಿದ್ದ ಚುರುಮುರಿಯನ್ನು ಆರು ಮಂದಿ ಸ್ನೇಹಿತೆಯರ ಜತೆಗೆ ಹಂಚಿಕೊಂಡು ತಿಂದಿದ್ದಾಳೆ. ಸ್ವಲ್ಪ ಸಮಯದ ನಂತರ ಅಸ್ವಸ್ಥಗೊಂಡಿದ್ದು, ಅವರನ್ನೆಲ್ಲಾ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್‌ ಬಿದರಿ ಆರ್‌. ತಿಳಿಸಿದ್ದಾರೆ.

‘ಬೆಟಗೇರಿ ಆಸ್ಪತ್ರೆಯಿಂದ ಮಕ್ಕಳನ್ನು ಜಿಮ್ಸ್‌ಗೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಮಕ್ಕಳನ್ನು ತಪಾಸಣೆ ನಡೆಸಿ, ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ, ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಮನೆಗೆ ಕಳುಹಿಸಿಕೊಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಉಪ್ಪಿಟ್ಟಿನ ಜತೆಗೆ ಚುರುಮುರಿ ಸೇವಿಸಿದ ಆರು ಮಂದಿ ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಎಲ್ಲರಿಗೂ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ತೊಂದರೆ ಇಲ್ಲ; ವಿದ್ಯಾರ್ಥಿಗಳೆಲ್ಲಾ ಈಗ ಆರಾಮಾಗಿದ್ದಾರೆ’ ಎಂದು ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.