
ಲಕ್ಕುಂಡಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯ ನಿಯಮದಂತೆ ರಾಜ್ಯ ಸರ್ಕಾರ ಶೇ 40 ಪಾಲನ್ನು ಭರಿಸಬೇಕಿದೆ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿವಾಗಿರುವ ಕಾರಣಕ್ಕೆ ಈ ಯೋಜನೆಯನ್ನು ವಿರೋಧಿಸುತ್ತಿದೆ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಇಲ್ಲಿಯ ವಿರುಪಾಕ್ಷೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಲಕ್ಕುಂಡಿ ಬಿಜೆಪಿ ಮಂಡಲದ ವತಿಯಿಂದ ನಡೆದ ವಿಬಿ ಜಿ ರಾಮ್ ಜಿ ಯೋಜನೆಯ ಕುರಿತ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರದ ಈ ಕಾಯಿದೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ವಿನಾಕಾರಣ ವಿರೋಧಿಸುತ್ತಿರುವುದು ಅವರ ಹತಾಶೆ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ 20 ಸಲ ಹೆಸರು ಬದಲಾವಣೆ ಮಾಡಿದ್ದನ್ನು ಜನರು ಇನ್ನೂ ಮರೆತಿಲ್ಲ’ ಎಂದರು.
‘ಈ ಕಾಯ್ದೆಯಲ್ಲಿ ಕಾರ್ಮಿಕರಿಗೆ ಹೆಚ್ಚು ಕೂಲಿ ಜತೆ ನಿಗದಿತ ಸಮಯಕ್ಕೆ ಕೂಲಿ ಮೊತ್ತ ಖಾತೆಗೆ ಜಮೆಯಾಗುತ್ತದೆ. 9 ದಿನಗಳ ಒಳಗಾಗಿ ಜಮೆಯಾಗದಿದ್ದರೆ ಬಡ್ಡಿ ಹಾಕಿ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ₹90 ಸಾವಿರ ಕೋಟಿಗೆ ಅನುದಾನ ನೀಡಲಿದೆ’ ಎಂದರು.
‘ಸಿದ್ದರಾಮಯ್ಯ ಅವರ ಸರ್ಕಾರ ₹8 ಲಕ್ಷ ಕೋಟಿ ಸಾಲದಲ್ಲಿದೆ. ಗ್ಯಾರಂಟಿ ಯೋಜನೆಗೆ ಹಣ ಕ್ರೋಡೀಕರಣಗೊಳಿಸಲು ಸಾಧ್ಯವಾಗದೇ, ಕೇಂದ್ರದ ಇಂತಹ ಜನಪರ ಯೋಜನೆಗಳ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಹಾಗಾಗಿ, ಬಿಜೆಪಿ ಕಾರ್ಯಕರ್ತರು ಜನರ ಮನೆ ಮನೆಗೆ ತೆರಳಿ ಈ ಯೋಜನೆ ಕುರಿತು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
ಬಿಜೆಪಿ ಮುಖಂಡ ವಸಂತ ಮೇಟಿ ಮಾತನಾಡಿ, ‘ಬಿಜೆಪಿ ಸಾಧನೆಯನ್ನು ಸಹಿಸಲಾರದೇ ರಾಜ್ಯ ಕಾಂಗ್ರೆಸ್ ಸರ್ಕಾರ ಮಹಾತ್ಮ ಗಾಂಧಿ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ’ ಎಂದು ದೂರಿದರು.
ಬಿಜೆಪಿ ಮುಖಂಡ ದತ್ತಣ್ಣ ಜೋಶಿ ಮಾತನಾಡಿ, ‘ವಿಬಿ ಜಿ ರಾಮ್ ಜಿ ಕಾಯ್ದೆಯು ಕಾರ್ಮಿಕರಿಗೆ 125 ದಿನಗಳ ಕೆಲಸ ಒದಗಿಸಲಿದೆ. ಗ್ರಾಮೀಣ ಜನರ ಉಪ ಜೀವನಕ್ಕೆ ಆರ್ಥಿಕವಾಗಿ ಸಹಾಯವಾಗಲಿದೆ’ ಎಂದರು.
ಲಕ್ಕುಂಡಿ ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶರಣಪ್ಪ ಕುದರಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಕಲಕೇರಿ, ಬಿಜೆಪಿ ಯುವನಾಯಕ ಉಮೇಶಗೌಡ ಪಾಟೀಲ, ಪ್ರದೀಪ ನವಲಗುಂದ, ಅಶೋಕ ಬೂದಿಹಾಳ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಫಕ್ಕೀರಮ್ಮ ಬೇಲೇರಿ ವೇದಿಕೆಯಲ್ಲಿದ್ದರು.
ಪ್ರಲ್ಹಾದ ಹೊಸಳ್ಳಿ ನಿರೂಪಿಸಿದರು. ಮರಿಯಪ್ಪ ವಡ್ಡರ ವಂದಿಸಿದರು. ಅತ್ತಿಮಬ್ಬೆ ಮಹಾದ್ವಾರದಿಂದ ವಿರುಪಾಕ್ಷೇಶ್ವರ ದೇವಸ್ಥಾನವರೆಗೂ ಪಾದಯಾತ್ರೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.