ADVERTISEMENT

ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರ ತಲೆದಂಡ: ಎಂ.ಎಂ.ಹಿರೇಮಠ ಕಿಡಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:25 IST
Last Updated 6 ಜೂನ್ 2025, 14:25 IST
ಎಂ.ಎಂ.ಹಿರೇಮಠ
ಎಂ.ಎಂ.ಹಿರೇಮಠ   

ಗದಗ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 50ಕ್ಕಿಂತ ಹೆಚ್ಚು ಜನ ಗಾಯಗೊಂಡ ಘಟನೆ ದೇಶದ ಜನರ ಮನಕಲುಕಿದೆ. ಆದರೆ, ಮುಖ್ಯಮಂತ್ರಿ, ಮುಖ್ಯಮಂತ್ರಿ  ಇದರ ಹೊಣೆಯನ್ನು ಪೋಲಿಸರ ಮೇಲೆ ಹಾಕಿ ಕೈತೊಳೆದುಕೊಂಡಿದ್ದಾರೆ’ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ.ಹಿರೇಮಠ ಖಂಡಿಸಿದ್ದಾರೆ.

‘ಗುಜರಾತ್‌ನಲ್ಲಿ ನಡೆದ ಐಪಿಎಲ್ ಅಂತಿಮ ಪಂದ್ಯ ಮಂಗಳವಾರ ರಾತ್ರಿ ಮುಗಿದಿತ್ತು. ಆಟಗಾರರು ಅಲ್ಲಿಯೇ ತಡರಾತ್ರಿವರೆಗೆ ಸಂಭ್ರಮ ಆಚರಿಸಿದ್ದರು. ಬುಧವಾರ ಬೆಳಿಗ್ಗೆ 10ಕ್ಕೆ ವಿಶೇಷ ವಿಮಾನದಲ್ಲಿ ಹೊರಟು ಬೆಂಗಳೂರಿನ ಸಾರ್ವಜನಿಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಅವರ ಮೇಲೆ ಒತ್ತಡ ಹೇರಿದ್ದು ಯಾರು? ಆರ್‌ಸಿಬಿ ಗೆದ್ದ ನಂತರ ರಾತ್ರಿಯಿಂದ ಬೆಳಿಗ್ಗೆವರೆಗೆ ಬೆಂಗಳೂರಿನಲ್ಲಿ ಸ್ಥಳೀಯ ಪೊಲೀಸರು ಸಾವಿರಾರು ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮವನ್ನು ನಿಯಂತ್ರಿಸಲು ಹೈರಾಣಾಗಿದ್ದರು. ಇದರ ನಡುವೆ ತಕ್ಷಣವೇ ಮತ್ತೆ ಸರ್ಕಾರದ ಅಧಿಕೃತ ಸಂಭ್ರಮಾಚರಣೆಯ ಹೊಣೆ ಹೊರೆಸಿ ಬಲವಂತದ ಸತ್ಕಾರವನ್ನು ವ್ಯವಸ್ಥೆ ಮಾಡಿದ ರಾಜಕಾರಣಿಗಳು ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಈ ಖಾತೆಯನ್ನು ನಿಭಾಯಿಸುವುದು ಗೊತ್ತಿಲ್ಲ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ಪೋಲಿಸ್ ಆಯುಕ್ತ, ಕಬ್ಬನಪಾರ್ಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್, ಆ ಭಾಗದ ಎಸಿಪಿ ಹಾಗೂ ಡಿಸಿಪಿಯನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಎಲ್ಲವನ್ನೂ ಪೋಲಿಸರ ಮೇಲೆ ಹಾಕಿದ ರಾಜ್ಯ ಸರ್ಕಾರ ತನ್ನದೇನೂ ತಪ್ಪ ಇಲ್ಲದ ಹಾಗೆ ವರ್ತಿಸಿದ್ದು ನಾಚಿಕೆಗೇಡಿನ ಸಂಗತಿ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತೆ ಯಾರದೋ ತಪ್ಪಿಗೆ ಇನ್ಯಾರನ್ನೋ ಬಲಿ ತೆಗೆದುಕೊಳ್ಳುವ ಹುನ್ನಾರ ನಡೆದಿದೆ. ಈ ಘಟನೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಇರಲಿಲ್ಲವೇ’ ಎಂದು ಟೀಕಿಸಿದ್ದಾರೆ.

ADVERTISEMENT

‘11 ಜನರ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಗೃಹಸಚಿವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.