ADVERTISEMENT

ಸಮಷ್ಟಿಪ್ರಜ್ಞೆಯ ಸಂಶೋಧಕ ಕಲಬುರ್ಗಿ

ಸಿದ್ಧಲಿಂಗ ಶ್ರೀಗಳ ಏಳನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಲ್ಲಿಕಾ ಘಂಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:34 IST
Last Updated 4 ಅಕ್ಟೋಬರ್ 2025, 6:34 IST
ಗದಗ ನಗರದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ನಡೆದ ಸಿದ್ಧಲಿಂಗ ಶ್ರೀಗಳ ಏಳನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿಯವರು ಕನ್ನಡಕ್ಕೆ ಅನುವಾದಿಸಿದ ‘ತೌಲನಿಕ ಧರ್ಮದರ್ಶನ’ ಕೃತಿ ಲೋಕಾರ್ಪಣೆಗೊಂಡಿತು
ಗದಗ ನಗರದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ನಡೆದ ಸಿದ್ಧಲಿಂಗ ಶ್ರೀಗಳ ಏಳನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿಯವರು ಕನ್ನಡಕ್ಕೆ ಅನುವಾದಿಸಿದ ‘ತೌಲನಿಕ ಧರ್ಮದರ್ಶನ’ ಕೃತಿ ಲೋಕಾರ್ಪಣೆಗೊಂಡಿತು   

ಗದಗ: ‘ಎಂ.ಎಂ. ಕಲಬುರ್ಗಿ ವ್ಯಕ್ತಿಗತ ಚಿಂತಕರಲ್ಲ; ಸಮಷ್ಟಿಪ್ರಜ್ಞೆಯುಳ್ಳ ಶೋಧನಾ ಮನೋಭಾವದವರಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ನಡೆದ ತೋಂಟದ ಸಿದ್ಧಲಿಂಗ ಶ್ರೀಗಳ ಏಳನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹೀಗೆ ಅನೇಕ ವಿಷಯಗಳ ಕುರಿತು ಮಾರ್ಗದರ್ಶನ ಮಾಡಬಲ್ಲ ಚೇತನ ಅವರಾಗಿದ್ದರು. ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಕುರಿತು ಅವರಿಗಿದ್ದ ನಿಲುವುಗಳು ಉತ್ಕೃಷ್ಟವಾಗಿದ್ದವು. ಅವರ ಬರಹಗಳನ್ನು ಪುನರವಲೋಕನ ಮಾಡಿದರೆ ನಾಡಿನ ಭವಿಷ್ಯದ ಕುರಿತು ಅವರಿಗಿದ್ದ ಕಾಳಜಿಯ ಅರಿವಾಗುತ್ತದೆ. ಅವರು ಇಲ್ಲ ಎನ್ನುವ ಕೊರಗು ಈಗ ನಿರಂತರ ಬಾಧಿಸುತ್ತದೆ’ ಎಂದು ಹೇಳಿದರು. 

ADVERTISEMENT

ಕೃತಜ್ಞತಾ ನುಡಿಗಳನ್ನಾಡಿದ ಹಿರಿಯ ಸಾಹಿತಿ ವೀರಣ್ಣ ರಾಜೂರ, ‘ಸಂತಸ ಹಾಗೂ ಸಂಕಟ ಎರಡೂ ಭಾವಗಳನ್ನು ತರುವ ಕಾರ್ಯಕ್ರಮ ಇದಾಗಿದೆ. ನನ್ನ ಗುರುಗಳಿಗೆ ಲಿಂಗೈಕ್ಯ ಗುರುಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಸಂತಸ ಒಂದೆಡೆಯಾದರೆ; ಇಬ್ಬರೂ ಗುರುಗಳು ನಮ್ಮನ್ನು ಅಗಲಿರುವ ದುಃಖ ಮತ್ತೊಂದೆಡೆ’ ಎಂದು ಹೇಳಿದರು.

‘ತೋಂಟದಾರ್ಯ ಶಿಕ್ಷಣ ಸಂಸ್ಥೆಯ ನೌಕರರ ಶ್ರಮದ ಹಣವನ್ನು ಒಳಗೊಂಡ ₹5 ಲಕ್ಷ ಮೊತ್ತದ ‘ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟೀಯ ಪ್ರಶಸ್ತಿ’ಗೆ ಅದರದ್ದೇ ಆದ ಮಹತ್ವ ಇದೆ’ ಎಂದು ಬಣ್ಣಿಸಿದರು.

ತೋಂಟದಾರ್ಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಸಂಗೀತ ನಡೆಯಿತು.

ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿದರು. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಭೈರನಟ್ಟಿಯ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಮಹಾಂತ ಸ್ವಾಮಿಗಳು, ಕೋರಣೇಶ್ವರ ಶ್ರೀಗಳು, ವೆಂಕಟಾಪೂರ ಶರಣರು, ಬಾಚಿಗೊಂಡನಹಳ್ಳಿ ಶ್ರೀ, ಮಹಾಂತದೇವರು, ಯಶವಂತಪುರ ಶ್ರೀ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಾ.ಹನುಮಾಕ್ಷಿ ಗೋಗಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಅಮರೇಶ ಸಂಗಡಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ ಇದ್ದರು.

ಇಂದಿನ ಸಂಕೀರ್ಣ ವ್ಯವಸ್ಥೆಯ ಅಂಕು– ಡೊಂಕು ಗಟ್ಟಿಯಾಗಿ ಪ್ರಶ್ನಿಸಲು ಹಾಗೂ ಸಮಕಾಲೀನ ಗೊಂದಲಗಳಿಗೆ ಪರಿಹಾರ ಸೂಚಿಸಲು ಎಂ.ಎಂ. ಕಲಬುರ್ಗಿ ಅವರು ಇರಬೇಕಿತ್ತು
ಮಲ್ಲಿಕಾ ಘಂಟಿ ವಿಶ್ರಾಂತ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.