
ಮುಂಡರಗಿ: ಕೃಷಿ ಹಾಗೂ ಕೃಷಿಯಾಧಾರಿತ ವೈವಿಧ್ಯಮಯ ಕೆಲಸ, ಕಾರ್ಯಗಳನ್ನು ಮಾಡುತ್ತಾ ನಿರಂತರ ಆದಾಯ ಪಡೆಯುತ್ತಿರುವ ತಾಲ್ಲೂಕಿನ ಬಾಗೇವಾಡಿ ಗ್ರಾಮದ ಯುವ ರೈತ ಮಲ್ಲನಗೌಡ ಪಾಟೀಲ, ಕೃಷಿಕರಿಗೆ ಮಾದರಿಯಾಗಿದ್ದಾರೆ.
ಎಂಟು ಎಕರೆ ಜಮೀನು ಹೊಂದಿರುವ ಮಲ್ಲನಗೌಡ ಪಾಟೀಲ ಅವರು ಅದರಲ್ಲಿ ಸಾಂಪ್ರದಾಯಿಕ ಹಾಗೂ ದೀರ್ಘಾವಧಿ ಫಸಲು ನೀಡುವ ಬೆಳೆಗಳನ್ನು ಬೆಳೆದು ಸಾಕಷ್ಟು ಆದಾಯ ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಕೃಷಿಯು ನಷ್ಟದ ಕಾಯಕವಲ್ಲ ಎನ್ನುವುದನ್ನು ತೋರಿಸಿಕೊಟ್ಡಿದ್ದಾರೆ.
ಮಲ್ಲನಗೌಡರು ಮೂರು ಎಕರೆ ಜಮೀನಿನಲ್ಲಿ ರೇಷ್ಮೆ (ಹಿಪ್ಪುನೇರಳೆ) ಬೆಳೆದಿದ್ದು, ಹತ್ತು ವರ್ಷಗಳಿಂದ ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಅದರಿಂದ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಈಚೆಗೆ 100 ಕೆ.ಜಿ. ರೇಷ್ಮೆ ಮಾರಾಟ ಮಾಡಿದ್ದು, ಅದರಿಂದ ₹80 ಸಾವಿರ ಪಡೆದುಕೊಂಡಿದ್ದಾರೆ.
ಒಂದೂವರೆ ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದು, ಮುಂದಿನ ವರ್ಷ ಅದು ಫಸಲು ನೀಡಲಿದೆ. ಸದ್ಯ ಅಡಿಕೆ ಗಿಡಗಳ ಮಧ್ಯದಲ್ಲಿ ಮಲ್ಲನಗೌಡ ಅವರು ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ನೆಡುವ ಯೋಚನೆಯಲ್ಲಿದ್ದು, ಅದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳತೊಡಗಿದ್ದಾರೆ. ಬೇಸಿಗೆಯಲ್ಲಿ ಗೆಜ್ಜೆ ಶೇಂಗಾ ಕೈಹಿಡಿಯುತ್ತದೆ ಎನ್ನುವ ಭರವಸೆಯ ಮೇಲೆ ಅವರು ಒಂದು ಎಕರೆ ಶೇಂಗಾ ಬಿತ್ತಿದ್ದು, ಅದು ಸೊಗಸಾಗಿ ಬೆಳೆಯುತ್ತಲಿದೆ.
ಜಮೀನಿನ ಸುತ್ತಲೂ 70 ತೆಂಗಿನ ಮರಗಳನ್ನು ನೆಟ್ಟಿದ್ದು, ಅವು ನಿರಂತರವಾಗಿ ಕಾಯಿ ನೀಡುತ್ತಲಿವೆ. ಈಗ ತೆಂಗಿಗೆ ಭಾರಿ ಬೇಡಿಕೆಯಿದ್ದು, ತೆಂಗಿನಿಂದ ಮಲ್ಲನಗೌಡರು ಸಾಕಷ್ಟು ಆದಾಯ ಪಡೆದುಕೊಳ್ಳುತ್ತಲಿದ್ದಾರೆ. ತೆಂಗಿನ ಜತೆಗೆ 4 ಚಿಕ್ಕು, 5 ಮಾವು, 8 ಲಿಂಬು, 30 ಕರಿಬೇವು ಮೊದಲಾದ ದೀರ್ಘಾವಧಿ ಫಸಲು ನೀಡುವ ಗಿಡಗಳನ್ನು ನೆಟ್ಟಿದ್ದು, ಅವು ನಿಯಮಿತವಾಗಿ ಫಲ ನೀಡುತ್ತಲಿವೆ.
ಜಮೀನಿನಲ್ಲಿ ಮಲ್ಲನಗೌಡರು ನಿಯಮಿತವಾಗಿ ಬೆಳೆಗಳಿಗೆ ಗೋಕೃಪಾಮೃತ ಹಾಗೂ ಜೀವಾಮೃತಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಜಮೀನಿನಲ್ಲಿ ಅವರು ನಿರೀಕ್ಷಿಸಿದಷ್ಟು ಫಸಲು ದೊರೆಯುತ್ತಿದೆ.
ರೈತರು ಕೇವಲ ಒಂದು ಬೆಳೆಯನ್ನು ಆಶ್ರಯಿಸದೆ ಬೇರೆ ಬೇರೆ ಬೆಳೆಗಳನ್ನು ಬೆಳೆಯಬೇಕು. ಕೃಷಿ ಜೊತೆಗೆ ಕೃಷಿಯಾಧಾರಿತ ವಿವಿಧ ಕೆಲಸಗಳನ್ನು ಮಾಡಬೇಕು.– ಮಲ್ಲನಗೌಡ ಪಾಟೀಲ, ಬಾಗೇವಾಡಿ ಗ್ರಾಮದ ರೈತ
ಹಾಲಿನಲ್ಲೂ ಆದಾಯ
ಕೃಷಿಯ ಜತೆಗೆ ಮಲ್ಲನಗೌಡರು ಹೈನುಗಾರಿಕೆ ಮಾಡುತ್ತಿದ್ದು ಮನೆಯಲ್ಲಿ ವಿವಿಧ ತಳಿಗಳ 12 ಹಸುಗಳನ್ನು ಸಾಕಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಹಸುಗಳಿಗೆ ಹುಲ್ಲು ಬೆಳೆಯುತ್ತಿದ್ದಾರೆ. ಹಸುಗಳಿಂದ ದೊರೆಯುವ ಹಾಲನ್ನು ಕೇಂದ್ರಕ್ಕೆ ಹಾಕುತ್ತಿದ್ದಾರೆ. ಅದರಿಂದ ಅವರಿಗೆ ನಿತ್ಯ ಆದಾಯ ಬರುತ್ತಲಿದೆ.
ಜತೆಗೆ ಬಾಗೇವಾಡಿ ಗ್ರಾಮದಲ್ಲಿ ಅವರೇ ಸ್ವತಃ ಒಂದು ಹಾಲಿನ ಕೇಂದ್ರವನ್ನು ತೆರೆದಿದ್ದು ನಿತ್ಯ ಎರಡು ಹೊತ್ತು ರೈತರಿಂದ ಸುಮಾರು 200-250 ಲೀಟರ್ ಹಾಲು ಸಂಗ್ರಹಿಸಿ ಹೂವಿನಹಡಗಲಿಗೆ ಕಳುಹಿಸುತ್ತಿದ್ದಾರೆ. ಅದರಿಂದಲೂ ಅವರು ನಿತ್ಯ ಕಮಿಷನ್ ಪಡೆದುಕೊಳ್ಳುತ್ತಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.