ಲಕ್ಷ್ಮೇಶ್ವರ ತಾಲ್ಲೂಕು ಯಳವತ್ತಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ದನದ ದೊಡ್ಡಿ
ಲಕ್ಷ್ಮೇಶ್ವರ: ರೈತರು ಎತ್ತು, ಆಕಳು, ಎಮ್ಮೆಗಳನ್ನು ಮಳೆ, ಗಾಳಿ, ಚಳಿಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಡಿ ದನದ ದೊಡ್ಡಿ ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮೂಲಕ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಿಸಿಕೊಳ್ಳಲು ಫಲಾನುಭವಿಗಳನ್ನು ಆಯ್ಕೆ ಮಾಡಿ ಯಾದಿ ಕಳುಹಿಸಿಕೊಡಬೇಕು. ಒಂದು ದನದ ದೊಡ್ಡಿ ನಿರ್ಮಿಸಿಕೊಳ್ಳಲು ₹56 ಸಾವಿರ ಖರ್ಚು ತಗಲುತ್ತದೆ.
ಆಯ್ಕೆಯಾದ ರೈತರು ಸ್ವಂತ ಖರ್ಚಿನಲ್ಲಿ ದೊಡ್ಡಿ ನಿರ್ಮಿಸಿಕೊಂಡು ಆಮೇಲೆ ಅದರ ಫೋಟೊಗಳನ್ನು ಸಂಬಂಧಿಸಿದ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‍ಲೋಡ್ ಮಾಡಬೇಕು. ನಂತರ ನರೇಗಾ ಯೋಜನೆಯಡಿ ಎನ್‍ಎಂಆರ್ ಮೂಲಕ ನೇರವಾಗಿ ರೈತರ ಖಾತೆಗೆ ಕೂಲಿ ಮೊತ್ತ ಪಾವತಿಯಾದರೆ ಉಳಿದ ಸಾಮಗ್ರಿ ವೆಚ್ಚ ಮೊತ್ತ ವೆಂಡರ್ ಅಥವಾ ಗುತ್ತಿಗೆದಾರರ ಖಾತೆಗೆ ಜಮೆ ಆಗುತ್ತಿತ್ತು. ನಂತರ ಗುತ್ತಿಗೆದಾರರು ರೈತರಿಗೆ ಹಣ ತೆಗೆಸಿ ಕೊಡಬೇಕಾಗುತ್ತಿತ್ತು.
ಆದರೆ 2022-23ರಲ್ಲಿ ಸಾಮಗ್ರಿ ವೆಚ್ಚವನ್ನೂ ವೆಂಡರ್ ಖಾತೆಗೆ ಜಮೆ ಮಾಡದೆ ನೇರವಾಗಿ ರೈತರ ಖಾತೆಗೆ ಜಮೆ ಮಾಡುವಂತೆ ಸರ್ಕಾರ ಇಲಾಖೆಗೆ ಸೂಚನೆ ನೀಡಿತು. ಅಲ್ಲಿಂದ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದಾಗಿ ಇಂದಿಗೂ ದನದ ದೊಡ್ಡಿ ಕಟ್ಟಿಸಿಕೊಂಡ ರೈತರಿಗೆ ಪೂರ್ಣ ಹಣ ಸಂದಾಯ ಆಗಿಲ್ಲ. ಹೀಗಾಗಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮ ಪಂಚಾಯ್ತಿಯಲ್ಲಿ 87, ಮಾಡಳ್ಳಿ 10, ಗೋವನಾಳ 10, ಶಿಗ್ಲಿ 6, ರಾಮಗೇರಿ 3, ಯಳವತ್ತಿ 10, ಆದರಹಳ್ಳಿ 50, ಹುಲ್ಲೂರು 50, ಬಟ್ಟೂರು 10 ಸೇರಿ 14 ಗ್ರಾಮ ಪಂಚಾಯಿತಿಗಳ 250ಕ್ಕೂ ಹೆಚ್ಚು ರೈತರಿಗೆ ದನದ ದೊಡ್ಡಿ ಹಣ ಬರಬೇಕಾಗಿದೆ. ಆದರೆ ಗುತ್ತಿಗೆದಾರರ ಖಾತೆಗೆ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿ ಮಾಡುವ ಪದ್ಧತಿ ಬದಲಾದ ನಂತರ 2022-23ರಲ್ಲಿ ದನದ ದೊಡ್ಡಿ ಕಟ್ಟಿಸಿಕೊಂಡ ರೈತರಿಗೆ ಇನ್ನೂ ಹಣ ಪಾವತಿ ಆಗಿಲ್ಲ.
‘ಹಣ ಜಮೆಗೆ ಸರ್ಕಾರ ಕ್ರಮವಹಿಸಲಿ’
‘ಪ್ರತಿದಿನ ಒಬ್ಬ ರೈತರಾದರೂ ದನದ ದೊಡ್ಡಿಯ ದುಡ್ಡಿಗಾಗಿ ಪಂಚಾಯಿತಿಗೆ ಬಂದು ಹೋಗುವುದು ಸಾಮಾನ್ಯವಾಗಿದೆ. ಶೀಘ್ರವೇ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ರೈತರ ಖಾತೆಗೆ ಹಣ ಜಮೆ ಮಾಡಲು ಕ್ರಮವಹಿಸಬೇಕು’ ಎಂದು ದೊಡ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು ಈಳಗೇರ ಹೇಳಿದರು.
‘ತಾಂತ್ರಿಕ ತೊಂದರೆಯಿಂದಾಗಿ ವಿಳಂಬ’
‘ಬಾಕಿ ಉಳಿದಿರುವ ದನದ ದೊಡ್ಡಿ ಹಣದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ತಾಂತ್ರಿಕ ತೊಂದರೆಯಿಂದಾಗಿ ಹಣ ಬರುವುದಕ್ಕೆ ಅಡ್ಡಿಯಾಗಿದೆ’ ಎಂದು ಮಾಡಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಂ.ಎನ್. ಮಲ್ಲೂರ ಹಾಗೂ ದೊಡ್ಡೂರು ಗ್ರಾಮ ಪಂಚಾಯ್ತಿ ಪಿಡಿಒ ಶಿವಕುಮಾರ ವಾಲಿ ತಿಳಿಸಿದರು.
ದನದ ದೊಡ್ಡಿ ಕಟ್ಟಿಸಿಕೊಂಡು ಎರಡ ವರ್ಷ ಆಗೇತಿ. ಆದರ್ ಇನ್ನೂ ರೊಕ್ಕ ಬಂದಿಲ್ಲ. ₹60 ಸಾವಿರ ಖರ್ಚ ಮಾಡೇನ್ರೀ.ಹನಮಪ್ಪ ಕಾಳಪ್ಪ ಲಮಾಣಿ, ರೈತ ದೊಡ್ಡೂರು ಗ್ರಾ. ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.