ADVERTISEMENT

ಮುಳಗುಂದ | ರಸಗೊಬ್ಬರ ಅಭಾವ: ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:57 IST
Last Updated 15 ಜುಲೈ 2024, 14:57 IST
ಮುಳಗುಂದ ಯೂರಿಯಾ ರಸಗೊಬ್ಬರ ಪೂರೈಕೆ ಆಗದ ಹಿನ್ನೆಲೆ ರೈತ ಸಂಘದ ಸದಸ್ಯರು ಕೃಷಿ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು
ಮುಳಗುಂದ ಯೂರಿಯಾ ರಸಗೊಬ್ಬರ ಪೂರೈಕೆ ಆಗದ ಹಿನ್ನೆಲೆ ರೈತ ಸಂಘದ ಸದಸ್ಯರು ಕೃಷಿ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು   

ಮುಳಗುಂದ: ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಬೆಳೆಗಳಿಗೆ ಅಗತ್ಯವಿರುವ ಯೂರಿಯಾ, ರಸಗೊಬ್ಬರ ಸ್ಥಳೀಯವಾಗಿ ಅಭಾವ ಉಂಟಾದ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸದಸ್ಯರು ಕೃಷಿ ಇಲಾಖೆ ವಿರುದ್ಧ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿ, ಕೃಷಿ ಜಂಟಿ ನಿದೇರ್ಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಈ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಹೆಸರು, ಗೋವಿನ ಜೋಳ, ಶೇಂಗಾ ಬೆಳೆಗಳ ರಕ್ಷಣೆಗೆ ಯೂರಿಯಾ ರಸಗೊಬ್ಬರ ಸ್ಥಳೀಯ ಆಗ್ರೋ ಕೇಂದ್ರಗಳು ಹಾಗೂ ಸೂಸೈಟಿಯಲ್ಲಿ ಲಭ್ಯವಾಗುತ್ತಿಲ್ಲ. ಬೇರೆ ಗ್ರಾಮಗಳಲ್ಲಿ ಹೆಚ್ಚಿನ ದರಕೊಟ್ಟು ಯೂರಿಯಾ ತರುವ ಸ್ಥಿತಿ ಪಟ್ಟಣದ ರೈತರಿಗೆ ಬಂದೊದಗಿದೆ. ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದ್ದ, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಅವರು ನಮ್ಮ ಪೋನ್ ಕರೆಗೆ ಸ್ಪಂದಿಸದೇ ಹಾರಿಕೆ ಉತ್ತರ ನೀಡಿದ್ದಾರೆ’ ಎಂದು ರೈತ ಸಂಘದ ದೇವರಾಜ ಸಂಗನಪೇಟಿ ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್, ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರಣ್ಣವರ ಯೂರಿಯಾ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಮುಳಗುಂದದಲ್ಲೆ ಯೂರಿಯಾ ಸಿಗಲಿದೆ. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಜಗ್ಗದ ರೈತರು ಜಂಟಿ ನಿರ್ದೇಶಕರು ಬರಬೇಕು, ಅವರು ರೈತರ ಪರ ಕೆಲಸ ಮಾಡುತ್ತಿಲ್ಲ ರೈತರು ಪೋನ್ ಕರೆ ಮಾಡಿದರೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಂತರ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಮಾತನಾಡಿ, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ನ್ಯಾಯ ಒದಗಿಸುವ ಭರವಸೆ ನೀಡಿ, ರೈತರ ಮನವೊಲಿಸಿದರು. ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದು, ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ, ದೇವಪ್ಪ ಅಣ್ಣಿಗೇರಿ, ಕಿರಣ ಕುಲಕರ್ಣಿ, ಮಹ್ಮದಲಿ ಶೇಖ, ಮಹಾಂತೇಶ ಗುಂಜಳ, ಗುಡುಸಾಬ ಗಾಡಿ, ಮುತ್ತಣ್ಣ ಪಲ್ಲೇದ, ಮಂಜುನಾಥ ಕಬಾಡಿ, ಪಟ್ಟಣ ಪಂಚಾಯ್ತಿ ಸದಸ್ಯ ಎನ್.ಆರ್.ದೇಶಪಾಂಡೆ, ಎಸ್.ಸಿ.ಬಡ್ನಿ, ಪಿಎಸ್‍ಐ ವಿ.ಎಸ್.ಚವಡಿ ಹಾಗೂ ರೈತ ಸಂಘದ ಸದಸ್ಯರು ಇದ್ದರು.

ಮುಳಗುಂದ ಪಟ್ಟಣಕ್ಕೆ ಯೂರಿಯಾ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ರೈತ ಸಂಘದವರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣ ಅವರಿಗೆ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.