
ಮುಳಗುಂದ: ಪಟ್ಟಣದಿಂದ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 64ರ ಪಾಲಾ ಬಾದಾಮಿ ರಸ್ತೆಯು ಸಂಪೂರ್ಣ ಹಾಳಾಗಿದೆ. ರಸ್ತೆ ದುರಸ್ತಿ ಕಾರ್ಯ ನಡೆಸದ ಕಾರಣ ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.
ಮುಳಗುಂದ-ಮಾಗಡಿ ಗ್ರಾಮದ ನಡುವೆ ಒಂದು ದಶಕದ ಹಿಂದೆ ಅಭಿವೃದ್ಧಿಪಡಿಸಿದ ರಸ್ತೆಯು ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವುದರಿಂದ ನಿತ್ಯ ಅನೇಕ ವಾಹನ ಸಂಚರಿಸುತ್ತಿದ್ದು, ಸಂಪೂರ್ಣವಾಗಿ ಹಾಳಾಗಿದೆ.
ರಸ್ತೆ ಮಧ್ಯದಲ್ಲಿ ಆಳವಾದ ಗುಂಡಿಗಳು ಬಿದ್ದ ಕಾರಣ ಅನೇಕ ಅಪಘಾತ ಸಂಭವಿಸಿವೆ. ಸಾರ್ವಜನಿಕರು ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಈಚೆಗೆ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಕ್ಯಾಂಟರ್ ವಾಹನವೊಂದು ಉರುಳಿ ಬಿದ್ದ ಕಾರಣ ರಸ್ತೆಯಲ್ಲಿನ ಗುಂಡಿಗಳಿಗೆ ಹಳೆಯ ಬಟ್ಟೆ ಎಸೆದು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಗದಗದಿಂದ ಲಕ್ಷ್ಮೇಶ್ವರಕ್ಕೆ ಸಂಚರಿಸುವ ವಾಹನಗಳು ನಾಗಾವಿ, ಶಿರಹಟ್ಟಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಹೋಗುವಂತಾಗಿದ್ದು, ಇದರಿಂದ ಅರ್ಧ ಗಂಟೆಯಲ್ಲಿ ಗದಗ ತಲುಪುವವರು ಗಂಟೆಗಟ್ಟಲೇ ಸಮಯ ವ್ಯಯಿಸಬೇಕಿದೆ’ ಎಂದು ವಾಹನ ಸವಾರ ಮಹಾಂತೇಶ ಕಣವಿ ಹೇಳಿದರು.
ರಸ್ತೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅನುದಾನ ಬಂದಿಲ್ಲ. ರಸ್ತೆಯಲ್ಲಿನ ಗುಂಡಿ ಮುಚ್ಚಿಸಲು ಗುತ್ತಿಗೆ ನೀಡಲಾಗಿದ್ದು ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳಲು ತಿಳಿಸಲಾಗುವುದುಉಮೇಶ ನಾಯಕ ಎಇಇ ಲೋಕೋಪಯೋಗಿ ಇಲಾಖೆ ಗದಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.