ADVERTISEMENT

ಗದಗ: ಬಾಳು ಬೆಳಗಿದ ಬಹುಬೆಳೆ ಪದ್ಧತಿ

ಕೃಷಿಯಿಂದ ಲಕ್ಷಾಂತರ ಆದಾಯ ಪಡೆಯುತ್ತಿರುವ ರೈತ ರವಿಕುಮಾರ ಗುಂಡಿಕೇರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:04 IST
Last Updated 21 ನವೆಂಬರ್ 2025, 8:04 IST
ಮುಂಡರಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ರೈತ ರವಿ ಗುಂಡಿಕೇರಿ ಅವರ ಜಮೀನಿನಲ್ಲಿ ಬೆಳೆದ ಪಪ್ಪಾಯಿ 
ಮುಂಡರಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ರೈತ ರವಿ ಗುಂಡಿಕೇರಿ ಅವರ ಜಮೀನಿನಲ್ಲಿ ಬೆಳೆದ ಪಪ್ಪಾಯಿ    

ಮುಂಡರಗಿ: ಒಂದೇ ಬೆಳೆಗೆ ಅಂಟಿಕೊಳ್ಳದೆ, ವೈವಿಧ್ಯಮಯ ಬೆಳೆಗಳನ್ನು ಬೆಳೆದರೆ ಕೃಷಿ ಲಾಭದಾಯಕವಾಗುತ್ತದೆ ಎಂಬುದಕ್ಕೆ ಸಾಕ್ಷಿಯಂತಿದ್ದಾರೆ ತಾಲ್ಲೂಕಿನ ನಾರಾಯಣಪುರ ಗ್ರಾಮದ ರವಿಕುಮಾರ ಗುಂಡಿಕೇರಿ.

40 ಎಕರೆ ಸ್ವಂತ ಜಮೀನನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆಯುತ್ತಿರುವ ಇವರು, ಲಕ್ಷಾಂತರ ರೂಪಾಯಿ ಆದಾಯ ಪಡೆದು, ಇತರೆ ರೈತರಿಗೆ ಮಾದರಿಯಾಗಿದ್ದಾರೆ.

25 ಎಕರೆ ಜಮೀನಿನಲ್ಲಿ ದಾಳಿಬೆ ಬೆಳೆದಿದ್ದು, ವರ್ಷಕ್ಕೆ ₹40 ಲಕ್ಷ ಆದಾಯ ಪಡೆಯುತ್ತಾರೆ. ಒಂದು ಎಕರೆಯಲ್ಲಿ ದಾಳಿಂಬೆ ಬೆಳೆಯಲು ₹1.50 ಲಕ್ಷ ಖರ್ಚು ಮಾಡಿದರೂ, ಖರ್ಚು ಕಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.

ADVERTISEMENT

‘ಎಂಟು ಎಕರೆಯಲ್ಲಿರುವ ಪಪ್ಪಾಯಿ ಬೆಳೆಯಿಂದ ₹30 ಲಕ್ಷ ಆದಾಯ ಸಿಗುತ್ತಿದೆ. ಎಂಟು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದೆ. ದರ ಕುಸಿತವಾಗಿದ್ದರಿಂದ, ನಿರೀಕ್ಷಿತ ಆದಾಯ ಸಿಗಲಿಲ್ಲ. ಎಂಟು ಎಕರೆ ಜಮೀನಿನಲ್ಲಿ ಬಿಳಿಜೋಳ ಬೆಳೆದಿರುವೆ. ಬೆಳೆ ಸೊಗಸಾಗಿ ಬಂದಿದೆ. ಚಳಿಗಾಲದ ನಂತರ ಕೊಯ್ಲು ಆರಂಭವಾಗಲಿದ್ದು, ಆದಾಯ ಚೆನ್ನಾಗಿ ಸಿಗಲಿದೆ. ಬಹುಬೆಳೆ ಪದ್ಧತಿ ಅನುಸರಿಸುತ್ತಿರುವುದರಿಂದ ಒಂದು ಬಳೆ ಕೈಕೊಟ್ಟರೂ, ಇನ್ನೊಂದು ಬೆಳೆ ಕೈಹಿಡುತ್ತದೆ’ ಎಂದು ತಮ್ಮ ಯಶಸ್ಸಿನ ಸೂತ್ರ ತೆರೆದಿಟುತ್ತಾರೆ ರವಿಕುಮಾರ. 

‘ಜಮೀನಿನ ಬದುಗಳಲ್ಲಿ 30 ತೆಂಗಿನ ಮರಗಳಿದ್ದು, ಅವು ನಿಯಮಿತವಾಗಿ ಫಲ ನೀಡುತ್ತಲಿವೆ.
ನಾಲ್ಕು ಎಕರೆ ಜಮೀನಿಗೆ ಒಂದರಂತೆ ಒಟ್ಟು 10 ಕೊಳವೆ ಬಾವಿಗಳನ್ನು ಕೊರೆಯಿಸಿದ್ದೇನೆ. ಅವುಗಳ ಮೂಲಕವೇ ನೀರು ಹಾಯಿಸುತ್ತೇನೆ. ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತೇನೆ’ ಎಂದರು.

ಮುಂಡರಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ರೈತ ರವಿ ಗುಂಡಿಕೇರಿ ಅವರ ಜಮೀನಿನಲ್ಲಿನ ದಾಳಿಂಬೆ ಬೆಳೆ 
ನಿಷ್ಠ ಹಾಗೂ ಪ್ರಾಮಾಣಿಕತೆಯಿಂದ ಹಗಲಿರುಳು ಜಮೀನಿನಲ್ಲಿ ದುಡಿದರೆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ. ಯೋಜನಾಬದ್ಧ ಕೃಷಿಯಿಂದ ಲಾಭ ನಿಶ್ಚಿತ.
– ರವಿಕುಮಾರ ಗುಂಡಿಕೇರಿ, ರೈತ

ಹೈನುಗಾರಿಕೆಯಿಂದ ಹೆಚ್ಚಿದ ಆದಾಯ

‘ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ಮಾಡುತ್ತಿದ್ದೇನೆ. 20 ಎಮ್ಮೆಗಳನ್ನು ಸಾಕಿದ್ದು ನಿತ್ಯ ಎರಡು ಹೊತ್ತು 20 ಲೀಟರ್ ಹಾಲು ನೀಡುತ್ತವೆ. ಹಾಲಿನ ಮಾರಾಟದಿಂದ ಒಳ್ಳೆಯ ಲಾಭವಾಗುತ್ತಿದೆ. ಸಗಣಿ ಹಾಗೂ ಮತ್ತಿತರ ತ್ಯಾಜ್ಯವನ್ನು ಸಾವಯವ ರೂಪದಲ್ಲಿ ಜಮೀನಿಗೆ ನೀಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಲು ಕಾರಣವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಲು ಈ ಮಾರ್ಗಗಳೇ ಕಾರಣವಾಗಿವೆ’ ಎಂಬುದು ರವಿಕುಮಾರ ತಿಳಿಸುವ ಯಶಸ್ಸಿನ ಸೂತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.