
ಮುಳಗುಂದ: ಸರ್ಕಾರದ ವಸತಿ ಯೋಜನೆಯಡಿ ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದ ನಿರ್ಗತಿಕರು, ಬಡ ಜನರ ಕಾಯುವಿಕೆಗೆ ಕೊನೆ ಎಂಬುದೇ ಇಲ್ಲವಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿಯು ನಿವೇಶನ ಖರೀದಿಸಿ 8 ವರ್ಷ ಕಳೆದಿದ್ದರೂ ಫಲಾನುಭವಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ವಾಜಪೇಯಿ ನಗರ ನಿವೇಶನ ಯೋಜನೆಯಡಿ ಬಸವೇಶ್ವರ ನಗರದ ಹತ್ತಿರದ ಸರ್ಕಾರಿ ಜಮೀನು ರಿ.ಸ. ನಂ 399ರ 4 ಎಕರೆ ಮತ್ತು ಅಂಬೇಡ್ಕರ್ ನಗರದ ಹತ್ತಿರದ ರಿ.ಸ.ನಂ.351/1, 351/2ರಲ್ಲಿ 6. 32 ಗುಂಟೆ ಜಮೀನನ್ನು 2017ರಲ್ಲಿ ಖರೀದಿಸಿ, ಭೂ ಪರಿವರ್ತನೆ ಮಾಡಿದ ಒಟ್ಟು ಜಮೀನಿನಲ್ಲಿ 372 ನಿವೇಶನಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 55, ಅಂಗವಿಕಲರಿಗೆ 12 ಹಾಗೂ ಸಾಮಾನ್ಯ ವರ್ಗಕ್ಕೆ 295 ನಿವೇಶನಗಳನ್ನು ಮೀಸಲಿಡಲಾಗಿದೆ.
ಪಟ್ಟಣ ಪಂಚಾಯಿತಿಯ ಆಶ್ರಯ ಸಮಿತಿಯು ನಿವೇಶನ ಹಂಚಿಕೆಗೆ 372 ಫಲಾನುಭವಿಗಳನ್ನು ಆಯ್ಕೆ ಮಾಡಿ, ಅ.16ರಂದು ಫಲಾನುಭವಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳಿದ್ದರೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿತ್ತು.
2020ರಿಂದ ಈವರೆಗೂ ವಸತಿ ನಿವೇಶನಕ್ಕಾಗಿ 1,565 ಅರ್ಜಿಗಳು ಸಲ್ಲಿಕೆ ಆಗಿದ್ದು, ಪ್ರಸ್ತುತ 372 ಫಲಾನುಭವಿಗಳನ್ನು ಆಶ್ರಯ ಸಮಿತಿಯು ತಾತ್ಕಾಲಿಕವಾಗಿ ಆಯ್ಕೆ ಮಾಡಿದೆ. ಆದರೆ ಈ ಆಯ್ಕೆ ಪಟ್ಟಿಯ ವಿರುದ್ದ ಸಾರ್ವಜನಿಕರು ಆಕ್ಷೇಪ ಎತ್ತಿದ್ದಾರೆ. ಅರ್ಹ ಫಲಾನುಭವಿಗಳನ್ನು ಕಡೆಗಣಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿವೇಶನ ಉಳ್ಳವರ ಪಾಲಾಗುತ್ತಿವೆ, ನಿರ್ಗತಿಕ ಅಂಗವಿಕಲ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಹತ್ತಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿರುವ ನೂರಾರು ಬಡ ಕುಟುಂಬಗಳು ನಿವೇಶನದ ಕನಸು ಇನ್ನೂ ಈಡೇರದಿರುವುದು ನಿವೇಶನರಹಿತರ ಆಕ್ರೋಶಕ್ಕೆ ಕಾರಣವಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಎರಡೇ ದಿನಗಳಲ್ಲಿ 93ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆ ಆಗಿವೆ. ಮನೆ ಇದ್ದವರು, ಅನರ್ಹರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ. ಈ ಕುರಿತು ಆಶ್ರಯ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಚ್.ಕೆ. ಪಾಟೀಲ ಅ.19 ರಂದು ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಹಲವರು, ಅರ್ಹರಿದ್ದರೂ ತಮ್ಮನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದರು.
ತಕ್ಷಣ ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ, ಮತ್ತೆ ಪರಿಶೀಲನೆ ನಡೆಸಿ ಅರ್ಹರನ್ನು ಗುರುತಿಸಬೇಕು ಎಂದು ಸೂಚನೆ ನೀಡಿದ್ದರು. ಸದ್ಯ ತಾತ್ಕಾಲಿಕ ಆಯ್ಕೆ ಪಟ್ಟಿಯ ಸರ್ವೇ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳ ಆಯ್ಕೆ ನಿವೇಶನ ಹಂಚಿಕೆ ಮತ್ತಷ್ಟು ವಿಳಂಬವಾಗಲಿದೆ.
ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದರಂತೆ ಮನೆಗಳ ನಿರ್ಮಾಣ ಕಾರ್ಯ ಆಗುತ್ತಿಲ್ಲ. 2002ರ ಈಚೆಗೆ ಆಶ್ರಯ ಮನೆಗಳ ನಿರ್ಮಾಣ, ನಿವೇಶನ ಹಂಚಿಕೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ನಿವೇಶನರಹಿತರ ಸಂಖ್ಯೆ ಸಾವಿರ ದಾಟಿದೆ. ಆದರೂ ನಿವೇಶನ ವಿತರಿಸುವಲ್ಲಿ ವಿಳಂಬವಾಗುತ್ತಿದ್ದು, ಕೂಡಲೇ ಆಶ್ರಯ ಸಮಿತಿ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ನಿವೇಶನ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಾರು ಏನಂತಾರೆ?
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರು ಸದ್ಯ ವಾಸವಿರುವುದು ಬಾಡಿಗೆ ಮನೆಯೋ ಅಥವಾ ಸ್ವಂತ ಮನೆಯೋ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸರ್ವೇ ಮಾಡುತ್ತಿದ್ದೇವೆ. ಪರಿಶೀಲನೆ ನಂತರ ಬಾಡಿಗೆ ಮನೆಯಲ್ಲಿ ಇದ್ದವರ ಪಟ್ಟಿಯನ್ನು ಪ್ರಕಟಿಸಲಾಗುವುದು. ನಿಯಮನುಸಾರ ಮತ್ತೆ ಫಲಾನುಭವಿಗಳ ಆಯ್ಕೆ ನಡೆಯಲಿದೆ.
ಮಂಜುನಾಥ ಗುಳೇದ, ಮುಳಗುಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಫಲಾನುಭವಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ಸಾಕಷ್ಟು ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಅರ್ಹತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಸ್ವಂತ ಮನೆ ಹೊಂದಿದ್ದರೆ ಅಂಥವರನ್ನು ಪಟ್ಟಿಯಿಂದ ತೆಗೆದು ಹಾಕಲಾಗುವುದು, ಪಾರದರ್ಶಕವಾಗಿ ಅರ್ಹರಿಗೆ ನಿವೇಶನ ಹಂಚಿಕೆ ಆಗಲಿದೆ.
ಬಿ.ವಿ. ಸುಂಕಾಪೂರ, ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯ, ಪಟ್ಟಣ ಪಂಚಾಯಿತಿ, ಮುಳಗುಂದ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ವಿತರಣೆ ಆಗಿಲ್ಲ. ಎಂಟು ವರ್ಷಗಳ ಹಿಂದೆ ನಿವೇಶನಕ್ಕಾಗಿ ಭೂಮಿ ಖರೀದಿಸಿದ್ದರೂ ಸ್ಥಳೀಯ ಆಡಳಿತ ಅರ್ಹರಿಗೆ ನಿವೇಶನ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಕೂಡಲೇ ಅರ್ಹ ಫಲಾನುಭವಿಗಳ ಆಯ್ಕೆ ಮಾಡಬೇಕು.
ಬುದ್ದಪ್ಪ ಮಾಡಳ್ಳಿ, ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ
2013ರಿಂದ ವಸತಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಅಂಗವಿಕಲ ಯಮನೂರಸಾಬ ಅವರಿಗೆ ಈವರೆಗೂ ನಿವೇಶನ ದೊರಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಆಶ್ರಯ ಸಮಿತಿ ಪರಿಶೀಲನೆ ನಡೆಸಬೇಕು. ಆಶ್ರಯ ಸಮಿತಿ ಸಭೆಯಲ್ಲಿ ಅರ್ಹರಿಗೆ ಮನೆ ಕೊಡಬೇಕು ಎಂದು ಸಾಕಷ್ಟು ಬಾರಿ ಒತ್ತಾಯಿಸಿದ್ದೆ. ನಿಜವಾದ ಫಲಾನುಭವಿಗಳಿಗೆ ನಿವೇಶನ ಸಿಗಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ.
ಲಕ್ಷ್ಮವ್ವ ಮಲ್ಲಪ್ಪ ಕುಂದಗೋಳ, ಮುಳಗುಂದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.