ಮುಂಡರಗಿ: ‘ಸಾಂಕ್ರಾಮಿಕವಾಗಿ ಹರಡುವ ಡೆಂಗಿ ಕಾಯಿಲೆಗೆ ನಿಖರವಾದ ಚಿಕಿತ್ಸೆ ಲಭ್ಯವಿಲ್ಲ. ಆದ್ದರಿಂದ ಡೆಂಗಿ ರೋಗ ಬಂದ ನಂತರ ಪರದಾಡುವುದಕ್ಕಿಂತ ರೋಗ ಬಾರದಂತೆ ಮುಂಜಾಗೃತೆ ವಹಿಸುವುದು ಉತ್ತಮ’ ಎಂದು ಜಿಲ್ಲಾ ಕೀಟತಜ್ಞೆ ಅನ್ನಪೂರ್ಣಾ ಶೆಟ್ಟರ ತಿಳಿಸಿದರು.
ಡೆಂಗಿ ವಿರೋಧಿ ಮಾಸಾಚರಣೆಯ ಅಂಗವಾಗಿ ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ವಸತಿ ನಿಲಯಗಳ ವಸತಿ ನಿಲಯ ಪಾಲಕರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಗಿ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಮಾತನಾಡಿ, ಡೆಂಗಿ ಜ್ವರದಲ್ಲಿ 3 ವಿಧಗಳಿದ್ದು, ಅವುಗಳು ರೋಗಿಯನ್ನು ತೀವ್ರವಾಗಿ ಬಾಧಿಸುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ನಾವು ಡೆಂಗಿ ಕಾಯಿಲೆಯಿಂದ ಬಚಾವಾಗವಹುದಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರುಣಾ ಸೋರಗಾವಿ ಮಾತನಾಡಿ, ವಸತಿ ನಿಲಯದ ನಿಲಯ ಪಾಲಕರು ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಬೇಕು. ಜ್ವರ, ಕೆಮ್ಮು, ನಗಡಿ ಮೊದಲಾದವುಗಳು ಕಾಣಿಸಿಕೊಂಡ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪಿ.ಎಫ್.ಗುಮ್ಮಗೋಳ ಮಾತನಾಡಿ, ಡೆಂಗಿ ರೋಗ ಹರಡದಂತೆ ಆರೋಗ್ಯ ಇಲಾಖೆಯು ಸೂಚಿಸಿದ ಎಲ್ಲ ಮಾರ್ಗಸೂಚಿಗಳನ್ನು ನಿಲಯ ಪಾಲಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಚ್ಛತೆಗೆ ಮೊದಲ ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ಕೆ.ಎಸ್.ಚೌಟಗಿ ಪ್ರಾರ್ಥನೆ ಹಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಎಂ.ಎಸ್.ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಲ್.ಕೋರಿ ಕೊನೆಯಲ್ಲಿ ವಂದಿಸಿದರು. ಸವಿತಾ ಸಾಸವಿಹಳ್ಳಿ, ಡಾ.ತಸ್ಮಿಯಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.