ಮುಂಡರಗಿ: 'ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯವರು ರೈತರ ಬೇಡಿಕೆ ಆಲಿಸದೆ ಹಾಗೂ ಕಬ್ಬು ಬೆಳೆಗಾರರಿಗೆ ಯಾವುdE ಮಾಹಿತಿ ನೀಡದೆ ಅ.13ರಂದು ಕಬ್ಬು ಅರೆಯಲು ಆರಂಭಿಸಲಿದ್ದು, ಅಂದು ಸಕ್ಕರೆ ಕಾರ್ಖಾನೆಗೆ ರೈತರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಳ್ಳಲಾಗುವುದು' ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ ತಿಳಿಸಿದರು.
ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕಬ್ಬು ಬೆಳೆಗಾರರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ರೈತ ಮುಖಂಡರು ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.
ವಾಡಿಕೆಯಂತೆ ಸಕ್ಕರೆ ಕಾರ್ಖಾನೆಯವರು ಕಬ್ಬು ಅರೆಯುವುದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿ ನಂತರ ಕಬ್ಬು ಅರೆಯುತ್ತಿದ್ದರು. ಆದರೆ ಪ್ರಸ್ತುತ ವರ್ಷ ಸಕ್ಕರೆ ಕಾರ್ಖಾನೆಯವರು ಯಾರಿಗೂ ಮಾಹಿತಿ ನೀಡದೆ ಅ.13ರಂದು ಕಬ್ಬು ಅರೆಯಲು ಆರಂಭಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಅ.14ರಂದು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಸಭೆ ನಡೆಯುವುದಕ್ಕೂ ಮುನ್ನ ಸಕ್ಕರೆ ಅರೆಯುವ ಮೂಲಕ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಟಾವು, ಸಾಗಾಣಿಕೆ ವೆಚ್ಚ ಮೊದಲಾದವುಗಳ ಹೆಸರಿನಲ್ಲಿ ಸಕ್ಕರೆ ಕಾರ್ಖಾನೆಯವರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಹಿಡಿತದಲ್ಲಿ ಸಿಲುಕಿದ್ದು, ಅವರು ಹೇಳಿದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ರೈತರ ಟನ್ ಕಬ್ಬಿಗೆ ₹ 3,329 ರೂಪಾಯಿ ನಿಗದಿ ಗೊಳಿಸಿದೆ. ಆದರೆ ಇಲ್ಲಿಯ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಟನ್ ಕಬ್ಬಿಗೆ ಕೇವಲ ₹ 2,565 ರೂಪಾಯಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಮುಗ್ಧ ರೈತರು ಅಧಿಕಾರಿಗಳ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೊಳಲ, ಪ್ರಕಾಶ ಸಜ್ಜನರ, ಹನುಮಂತ ಚೂರಿ, ವೀರೇಶ ಕವಲೂರ, ಹುಸೇನಸಾಬ್ ಕುರಿ, ರಂಜಿತ ಮದ್ಯಪಾಟಿ, ಕೊಟೆಪ್ಪ ಚೌಡಕಿ, ವೀರೇಶ ಹಲವಾಗಲಿ, ಈರಣ್ಣ ಕಾತರಕಿ, ನಿಂಗಪ್ಪ ಬಂಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.