ADVERTISEMENT

ಮುಂಡರಗಿ | ಮಿಶ್ರ ಬೇಸಾಯದ ಮೂಲಕ ಲಾಭ ಪಡೆದ ಯುವ ರೈತ

ನಿರಂತರ ಆದಾಯ ಬರುವಂತೆ ಯೋಜನೆ: ಕೈಹಿಡಿದ ಕೃಷಿ

ಕಾಶಿನಾಥ ಬಿಳಿಮಗ್ಗದ
Published 19 ಡಿಸೆಂಬರ್ 2025, 4:16 IST
Last Updated 19 ಡಿಸೆಂಬರ್ 2025, 4:16 IST
ಮುಂಡರಗಿ ಪಟ್ಟಣದ ಯುವ ರೈತ ಮಂಜಣ್ಣ ಹುಯಿಲಗೋಳ ಅವರು ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಬೆಳೆ ಪರಿಶೀಲಿಸಿದರು
ಮುಂಡರಗಿ ಪಟ್ಟಣದ ಯುವ ರೈತ ಮಂಜಣ್ಣ ಹುಯಿಲಗೋಳ ಅವರು ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಬೆಳೆ ಪರಿಶೀಲಿಸಿದರು   

ಮುಂಡರಗಿ: ಪಟ್ಟಣದ ಮಂಜಣ್ಣ ಹುಯಿಲಗೋಳ ಎಂಬ ಯುವ ರೈತರೊಬ್ಬರು ಸಾಂಪ್ರದಾಯಿಕ ಹಾಗೂ ದೀರ್ಘಾವಧಿ ಫಸಲು ನೀಡುವ ಕೃಷಿ ಪದ್ಧತಿಯಿಂದ ನಿರಂತರ ಆದಾಯ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಸ್ವಂತ 13 ಎಕರೆ ಹಾಗೂ ಗುತ್ತಿಗೆ ಪಡೆದ 7ಎಕರೆ ಜಮೀನು ಹೊಂದಿರುವ ಮಂಜಣ್ಣ ಅವರು ಕೃಷಿಯನ್ನೇ ತಮ್ಮ ಜೀವನದ ಆಧಾರವಾಗಿ ಮಾಡಿಕೊಂಡಿದ್ದು, ಪ್ರತಿ ವರ್ಷ ವೈವಿಧ್ಯದ ಬೆಳೆ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಸ್ವಂತ ಜಮೀನಿನಲ್ಲಿ ಹಾಗಲಕಾಯಿ, ಬೆಂಡೆಕಾಯಿ, ಸವತೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ ಮಾರುಕಟ್ಟೆ ಹತ್ತಿರದಲ್ಲಿಯೇ ಇರುವುದರಿಂದ ತಾವು ಬೆಳೆದ ತಾಜಾ ತರಕಾರಿಯನ್ನು ನಿತ್ಯ ಸುಲಭವಾಗಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಕಳೆದ ವರ್ಷ ತರಕಾರಿ ಬೆಳೆಯಿಂದ ₹3 ಲಕ್ಷ ಆದಾಯ ಗಳಿಸಿದ್ದಾರೆ.

ADVERTISEMENT

ಎರಡು ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದು, ಮುಂಬರುವ ದಿನಗಳಲ್ಲಿ ಭಾರಿ ಆದಾಯ ಗಳಿಸುವ ನಿರೀಕ್ಷೆಯಲ್ಲಿರುವ ಮಂಜಣ್ಣ ಅವರು ಐದು ವರ್ಷಗಳ ಹಿಂದೆ ನಾಲ್ಕು ಎಕರೆ ಜಮೀನಿನಲ್ಲಿ 1 ಸಾವಿರ ಶ್ರೀಗಂಧ ಮರ ಹಾಗೂ 19,000 ಮಾಗಣಿ ಗಿಡ ಬೆಳೆದಿದ್ದಾರೆ. ಮುಂದಿನ ಐದು ವರ್ಷಗಳ ನಂತರ ಎರಡೂ ಬೆಳೆಗಳು ಕಟಾವಿಗೆ ಬರಲಿವೆ ಎಂದು ರೈತ ಮಂಜಣ್ಣ ಹುಯಿಲಗೋಳ ತಿಳಿಸಿದರು. 

ಮಾರುಕಟ್ಟೆಯಲ್ಲಿ ಕೆ.ಜಿ. ಶ್ರೀಗಂಧ ₹10-12 ಸಾವಿರ ಹಾಗೂ ಘನ ಪೂಟ್ ಮಾಗಣಿ ಕಟ್ಟಿಗೆ ₹8 ಸಾವಿರಕ್ಕೆ ಮಾರಾಟವಾಗುತ್ತಿದೆ. ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಅಂದಾಜು ಏಳು ಕೋಟಿ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ತೋಟದ ಸುತ್ತಲು 30 ತೆಂಗಿನ ಮರ, 5 ಪೇರಲ ಮರ ಬೆಳೆದಿದ್ದಾರೆ. 

ಗೋಕೃಪಾಮೃತ ವಿತರಣೆ: ಮಂಜಣ್ಣ ಅವರು ನಾಲ್ಕು ಹಸು, ನಾಲ್ಕು ಎಮ್ಮೆ, ಐದು ಮೇಕೆ ಹಾಗೂ ನಾಟಿ ಕೋಳಿ ಸಾಕಿದ್ದು, ಮನೆಯಲ್ಲಿಯೆ ಸಗಣಿ, ಜಾನುವಾರು ಮೂತ್ರ, ಮಜ್ಜಿಗೆ, ಕಡಲೆ ಹಿಟ್ಟು, ಬೆಲ್ಲ ಮೊದಲಾದವುಗಳ ಮಿಶ್ರಣದಿಂದ ಗೋಕೃಪಾಮೃತ ತಯಾರಿಸುತ್ತಾರೆ. ಬೆಳೆದ ಬೆಳೆಗಳಿಗೆ ಗೋಕೃಪಾಮೃತ, ಸಾವಯವ ಗೊಬ್ಬರ ನೀಡುತ್ತಾರೆ. ಇದರಿಂದ ಇಳವರಿ ಹೆಚ್ಚು ಪಡೆಯುತ್ತಾರೆ.

ಜಾನುವಾರುಗಳ ಆರೈಕೆಯಲ್ಲಿ ತೊಡಗಿರುವ ಮುಂಡರಗಿ ಪಟ್ಟಣದ ಯುವ ರೈತ ಮಂಜಣ್ಣ ಹುಯಿಲಗೋಳ
ರೈತರು ಒಂದೇ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಬದಲು ವೈವಿಧ್ಯ ಪದ್ಧತಿ ಅಳವಡಿಸಿಕೊಂಡರೆ ಸಂಭವಿಸಬಹುದಾದ ಕೃಷಿ ನಷ್ಟಗಳಿಂದ ಪಾರಾಗಬಹುದು
ಮಂಜಣ್ಣ ಹುಯಿಲಗೋಳ ಮುಂಡರಗಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.