ADVERTISEMENT

ಹೆಸರು ಖರೀದಿಗೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 4:38 IST
Last Updated 29 ಆಗಸ್ಟ್ 2021, 4:38 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿದರು
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿದರು   

ಗದಗ: ‘ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಹೆಸರು ಉತ್ಪನ್ನವನ್ನು ಮಾರ್ಕ್‌ಫೆಡ್ ಸಂಸ್ಥೆಯ ಮೂಲಕ ಖರೀದಿಸಲು ಸರ್ಕಾರ ಆದೇಶಿದ್ದು, ನೋಂದಣಿ ಆರಂಭಿಸಿ ಹೆಸರು ಖರೀದಿಗೆ ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚಿಸಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು ಹುಟ್ಟುವಳಿ ಖರೀದಿಸುವ ಕುರಿತಾದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಹೆಸರು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ₹7,275ರಂತೆ ಖರೀದಿಗೆ ದರ ನಿಗದಿಪಡಿಸಿದೆ. 45 ದಿನದವರೆಗೆ ನೋಂದಣಿ ಹಾಗೂ ನೋಂದಣಿ ಜತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯುವಂತೆ ರೈತರಿಗೆ ತಿಳಿಸಲು ಖರೀದಿ ಕೇಂದ್ರದ ಮುಂದೆ ಬ್ಯಾನರ್‌ ಅಳವಡಿಕೆ, ಕರಪತ್ರ ಮುದ್ರಿಸಿ ಹಂಚುವುದರ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ನೋಂದಣಿ ವೇಳೆ ರೈತರು ಹಾಜರುಪಡಿಬೇಕಾದ ಅಗತ್ಯ ದಾಖಲೆಗಳು ಯಾವುವು ಎಂಬುದನ್ನು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿಕೊಡಬೇಕು’ ಎಂದು ಹೇಳಿದರು.

‘ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಹೆಸರು ಬೆಳೆಯನ್ನು ದಾಸ್ತಾನು ಮಾಡಲು ಜಿಲ್ಲೆಯಲ್ಲಿರುವ ರಾಜ್ಯ ಹಾಗೂ ಕೇಂದ್ರ ಉಗ್ರಾಣಗಳಲ್ಲಿ ಸ್ಥಳ ಕಾಯ್ದಿರಿಸಬೇಕು’ ಎಂದು ಹೇಳಿದರು.

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಲಚ್ಚಾಣಿ ಮಾತನಾಡಿ, ‘ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆದಿದ್ದು ಪ್ರಸ್ತುತ ಗದಗ, ನರಗುಂದ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ಮಾರುಕಟ್ಟೆ ಸಮಿತಿಗಳಲ್ಲಿ ಹೆಸರು ಹುಟ್ಟುವಳಿಯ ಆವಕ ಆಗುತ್ತಿದೆ. ಮಾರುಕಟ್ಟೆ ದರವು ₹3,000ದಿಂದ ₹7,800ರವರೆಗೆ ಇದ್ದು, ಸರಾಸರಿ ₹6,500 ಇದೆ. ಹೆಸರು ಹುಟ್ಟುವಳಿಗೆ ಪ್ರತಿ ಕ್ವಿಂಟಲ್‌ಗೆ ₹7,275ಗಳಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಪ್ರಸ್ತುತ ಮಾರುಕಟ್ಟೆ ದರವು ಕೇಂದ್ರ ಸರ್ಕಾರವು ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಇದೆ’ ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ‘ಜಿಲ್ಲೆಯಲ್ಲಿ ಗದಗ ಹಾಗೂ ನರಗುಂದದಲ್ಲಿ ಮಾರ್ಕ್‌ಫೆಡ್ ಸಂಸ್ಥೆಯ ಶಾಖೆಗಳಿದ್ದು ಗದಗ ಶಾಖೆಯ ವ್ಯಾಪ್ತಿಯಲ್ಲಿ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕುಗಳು ಹಾಗೂ ನರಗುಂದ ಶಾಖೆಯ ವ್ಯಾಪ್ತಿಯಲ್ಲಿ ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳು ಬರುತ್ತವೆ. ಜಿಲ್ಲೆಯ 40 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಎರಡು ಶಾಖೆಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿರಾದಾರ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕಿ ಗಿರಿಜಮ್ಮ, ಸಹಕಾರ ಸಂಘಗಳ ಉಪನಿಬಂಧಕರು, ಮಾರ್ಕೆಟಿಂಗ್ ಫೆಡರೇಷನ್ ನರಗುಂದ ಹಾಗೂ ಗದಗ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗಳು, ಜಿಲ್ಲೆಯ ಉಗ್ರಾಣ ನಿಗಮದ ವ್ಯವಸ್ಥಾಪಕರು ಇದ್ದರು.

ಖರೀದಿ ಕೇಂದ್ರಗಳ ತಾಲ್ಲೂಕುವಾರು ವಿವರ

ಗದಗ: ಪಿಎಸಿಎಸ್ ಹರ್ತಿ, ಬಳಗಾನೂರ, ಹರ್ಲಾಪುರ, ಶಿರೋಳ, ಕೋಟುಮಚಗಿ- 2, ಹೊಂಬಳ ನೀರಲಗಿ, ಸೊರಟೂರ, ಕದಡಿ, ಲಿಂದಾಳ, ಪ್ರಭುಸ್ವಾಮಿ ಎಫ್‌ಪಿಒ ಹೊಂಬಳ, ಟಿಎಪಿಸಿಎಂಎಸ್ ಗದಗ, ಶ್ರಮಜೀವಿ ಎಫ್‌ಪಿಒ ಹಿರೇಹಂದಿಗೋಳ, ರೈತ ಆಧಾರ ಕೃಷಿ ಮತ್ತು ತೋಟಗಾರಿಕೆ ಎಫ್‌ಪಿಒ ಕಣಗಿನಹಾಳ.

ಶಿರಹಟ್ಟಿ: ಪಿಎಸಿಎಸ್ ಶಿರಹಟ್ಟಿ

ಲಕ್ಷ್ಮೇಶ್ವರ: ಪಿಎಸಿಎಸ್ ಯಳವತ್ತಿ, ಟಿಎಪಿಸಿಎಂಎಸ್ ಲಕ್ಷ್ಮೇಶ್ವರ

ಮುಂಡರಗಿ: ಪಿಎಸಿಎಸ್ ಆಲೂರ, ಪೇಠಾಲೂರ, ಟಿಎಪಿಸಿಎಂಎಸ್ ಮುಂಡರಗಿ

ನರಗುಂದ: ಪಿಎಸಿಎಸ್ ಚಿಕ್ಕನರಗುಂದ, ಸುರಕೋಡ, ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪುರ, ಟಿಎಪಿಸಿಎಂಎಸ್ ನರಗುಂದ

ರೋಣ: ಪಿಎಸಿಎಸ್ ಹೊಸಳ್ಳಿ, ಮಲ್ಲಾಪುರ, ರೋಣ-2 , ಅಬ್ಬಿಗೇರಿ, ಯಾವಗಲ್, ಕೌಜಗೇರಿ, ಬೆಳವಣಕಿ, ಟಿಎಪಿಸಿಎಂಎಸ್ ರೋಣ.

ಗಜೇಂದ್ರಗಡ: ಟಿಎಪಿಸಿಎಂಎಸ್ ನರೇಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.